ADVERTISEMENT

ಬಾಬಾ ಸಿದ್ದೀಕಿ ಹತ್ಯೆ: ಯೂಟ್ಯೂಬ್ ನೋಡಿ ಶೂಟ್ ಮಾಡುವುದನ್ನು ಕಲಿತಿದ್ದ ಹಂತಕರು!

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಮುಂಬೈ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2024, 4:03 IST
Last Updated 16 ಅಕ್ಟೋಬರ್ 2024, 4:03 IST
ಯೂಟ್ಯೂಬ್
ಯೂಟ್ಯೂಬ್    

ಬೆಂಗಳೂರು: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಮುಂಬೈ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಇಬ್ಬರಾದ ಗುರ್ಮೈಲ್‌ ಬಲ್ಜಿತ್‌ ಸಿಂಗ್‌ ಹಾಗೂ ಧರ್ಮರಾಜ್ ಕಶ್ಯಪ್ ಅವರು ಗುಂಡು ಹಾರಿಸುವ ಕಲೆಯನ್ನು ಯೂಟ್ಯೂಬ್ ನೋಡಿ ಕಲಿತಿದ್ದರು ಎಂದು ತನಿಖಾಧಿಕಾರಿಗಳು ಹೇಳಿರುವುದಾಗಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ‌.

ಯೋಜನೆಗೂ ಮುನ್ನ ಈ ಇಬ್ಬರೂ ಯೂಟ್ಯೂಬ್ ವಿಡಿಯೊಗಳನ್ನು ನೋಡಿ ಗುಂಡು ಹಾರಿಸುವುದು, ಟಾರ್ಗೆಟ್ ಹತ್ಯೆ ಮಾಡುವುದನ್ನು ಕಲಿತಿದ್ದರು. ಬಳಿಕ ಯೋಜನೆ ರೂಪಿಸಿದವರು ಇವರಿಗೆ ಸಿದ್ದೀಕಿ ಮತ್ತು ಅವರ ಮಗನನ್ನು ಕೊಲ್ಲುವ ಹೊಣೆಯನ್ನು ನೀಡಿದ್ದರು ಎಂದು ತಿಳಿಸಿದ್ದಾರೆ.

ADVERTISEMENT

ಇನ್ನೂ ಮೂವರು ಪ್ರಮುಖ ಆರೋಪಿಗಳು ತಪ್ಪಿಸಿಕೊಂಡಿದ್ದು ಅವರ ಬಂಧನಕ್ಕೆ ತೀವ್ರ ಹುಡುಕಾಟ ನಡೆದಿದೆ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮುಂಬೈ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು ನಾಲ್ವರನ್ನು ಬಂಧಿಸಿದಂತಾಗಿದೆ. ಹರಿಯಾಣದ ನಿವಾಸಿ ಗುರ್ಮೈಲ್‌ ಬಲ್ಜಿತ್‌ ಸಿಂಗ್‌ (23), ಉತ್ತರ ಪ್ರದೇಶದ ಧರ್ಮರಾಜ್‌ ರಾಜೇಶ್‌ ಕಶ್ಯಪ್‌ (19) ಮತ್ತು ಸಹ ಸಂಚುಕೋರ ಪುಣೆಯ ಪ್ರವೀಣ್‌ ಲೋಣಕರ್ (25) ಮತ್ತು ಉತ್ತರ ಪ್ರದೇಶದ ಬಹರಾಯಿಚ್‌ ಮೂಲದ ಹರೀಶ್‌ಕುಮಾರ್‌ ಬಾಲಕರಾಮ್‌ (23) ಬಂಧಿತರು.

ಮತ್ತೊಬ್ಬ ಶಂಕಿತ ಶೂಟರ್‌ ಶಿವಕುಮಾರ್‌ ಗೌತಮ್‌ ಮತ್ತು ಆರೋಪಿ ಮೊಹಮ್ಮದ್‌ ಜಿಶನ್‌ ಅಖ್ತರ್‌ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.