ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಾಬರಿ ಮಸೀದಿ ನೆಲಸಮ ಪ್ರಕರಣದ ಆರೋಪಿ ಕಲ್ಯಾಣ್ ಸಿಂಗ್ ಶುಕ್ರವಾರ ಸಿಬಿಐ ನ್ಯಾಯಾಲಯಕ್ಕೆ ಶರಣಾದರು. ಬಳಿಕ ವೈಯಕ್ತಿಕ ₹ 2 ಲಕ್ಷದ ಬಾಂಡ್ ಆಧರಿಸಿ ಅವರಿಗೆ ಜಾಮೀನು ನೀಡಲಾಯಿತು.
ಸಿಬಿಐ ಸಿಂಗ್ ವಿರುದ್ಧ ಧರ್ಮದ ಆಧಾರದಲ್ಲಿ ದ್ವೇಷ ಬೆಳೆಸುವುದು (ಐಪಿಸಿ 153ಎ), ದೇಶದ ಏಕತೆಗೆ ಧಕ್ಕೆ ತರುವುದು (152ಬಿ), ಪ್ರಾರ್ಥನಾ ಸ್ಥಳ ಅಥವಾ ವಸ್ತುವನ್ನು ನಾಶಪಡಿಸುವುದು (295), ಧಾರ್ಮಿಕ ಭಾವನೆಗೆ ಧಕ್ಕೆ ಆಗುವಂತೆ ಉದ್ದೇಶಪೂರ್ವಕವಾಗಿ ವರ್ತಿಸುವುದು (295ಎ) ಮತ್ತು ಪ್ರಚೋದನಾತ್ಮಕ ಹೇಳಿಕೆ ನೀಡುವುದು (505) ಕುರಿತು ಆರೋಪಗಳನ್ನು ದಾಖಲಿಸಿದೆ.
ಕಲ್ಯಾಣ್ ಸಿಂಗ್ ಅವರು ರಾಜಸ್ತಾನ ರಾಜ್ಯಪಾಲರ ಹುದ್ದೆಯನ್ನು ತೆರವು ಮಾಡಿದ ಹಿಂದೆಯೇ ಸಿಬಿಐ ಸಿಂಗ್ ಅವರ ವಿರುದ್ಧ ವಿಚಾರಣೆಗೆ ಚಾಲನೆ ನೀಡಿತ್ತು. ಐದು ವರ್ಷಗಳ ಅವಧಿ ಬಳಿಕ ಕಳೆದ ವಾರವಷ್ಟೇ ಸಿಂಗ್ ಅಧಿಕಾರದಿಂದ ನಿರ್ಗಮಿಸಿದ್ದರು.
1992ರಲ್ಲಿ ಸಾವಿರಾರು ಕರಸೇವಕರು ಬಾಬರಿ ಮಸೀದಿ ನೆಲಸಮಗೊಳಿಸಿದ ಸಂದರ್ಭದಲ್ಲಿ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದರು. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆಗಾಗಿ ಸಿಂಗ್ ಅವರಿಗೆ ದಂಡ ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.