ಮುಂಬೈ: ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿರುವುದನ್ನು ಶಿವಸೇನಾ ಸ್ವಾಗತಿಸಿದೆ.
ಈ ವಿಚಾರವಾಗಿ ಎಎನ್‌ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕ ಸಂಜಯ್ ರಾವುತ್, 'ಶಿವಸೇನಾ ಪಕ್ಷವು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತದೆ. ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಪ್ರಕರಣದಲ್ಲಿ ನಿರ್ದೋಷಿಗಳಾಗಿರುವಎಲ್ಲರನ್ನೂ ನಾನು ಅಭಿನಂದಿಸುತ್ತೇನೆ' ಎಂದು ತಿಳಿಸಿದ್ದಾರೆ.
'ಮಸೀದಿ ಧ್ವಂಸ ಪ್ರಕರಣವು ಪಿತೂರಿ ಅಲ್ಲ ಮತ್ತು ಅದು ಆಯಾ ಕಾಲಘಟ್ಟದ ಫಲಿತಾಂಶವಾಗಿದೆ ಎಂದು ತೀರ್ಪು ಹೊರಬಂದಿರುವುದು ನಿರೀಕ್ಷಿತವಾಗಿತ್ತು. ಆ ಪ್ರಸಂಗವನ್ನು ನಾವೀಗ ಮರೆಯಬೇಕು. ಬಾಬರಿ ಮಸೀದಿಯನ್ನು ಧ್ವಂಸ ಮಾಡದೇ ಇದ್ದರೆ, ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಭೂಮಿ ಪೂಜೆಯನ್ನು ನಾವುನೋಡುತ್ತಿರಲಿಲ್ಲ' ಎಂದು ಸಂಜಯ ರಾವುತ್ ಹೇಳಿದ್ದಾರೆ.
ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆರೋಪಿಗಳನ್ನು ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ತೀರ್ಪು ನೀಡಿದೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಪ್ರಕರಣದ ಎಲ್ಲ 32 ಆರೋಪಿಗಳೂ ನಿರ್ದೋಷಿಗಳೆಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.