ಶ್ರೀನಗರ: ಕಾಶ್ಮೀರದ ಎರಡು ಕಡೆಗಳಲ್ಲಿ ಉಗ್ರರು ಶನಿವಾರ ರಾತ್ರಿ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಶೋಪಿಯಾನ್‌ನಲ್ಲಿ ಮಾಜಿ ಸರಪಂಚನ ಹತ್ಯೆ ಮಾಡಲಾಗಿದ್ದು, ಅನಂತ್‌ನಾಗ್‌ನಲ್ಲಿ ರಾಜಸ್ಥಾನ ಮೂಲದ ದಂಪತಿ ಗಾಯಗೊಂಡಿದ್ದಾರೆ.
ಬಾರಾಮುಲ್ಲಾ ಲೋಕಸಭೆ ಚುನಾವಣೆಯ ಮತದಾನ ಮೇ 20ರಂದು ನಡೆಯಲಿರುವಂತೆಯೇ ಈ ಘಟನೆ ನಡೆದಿದೆ.
ಪಹಲ್‌ಗಾಮ್ ಬಳಿಯ ಪ್ರವಾಸಿ ಶಿಬಿರದ ಮೇಲೆ ಮೊದಲ ದಾಳಿ ವರದಿಯಾಗಿದೆ. ದಕ್ಷಿಣ ಕಾಶ್ಮೀರದ ಹೀರ್‌ಪೋರಾದಲ್ಲಿ ಎರಡನೇ ದಾಳಿ ನಡೆದಿದ್ದು, ಮಾಜಿ ಸರಪಂಚ ಏಜಾಜ್ ಶೇಖ್ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಬಿಜೆಪಿ ಕಾರ್ಯಕರ್ತ ಎಂದು ತಿಳಿದು ಬಂದಿದೆ.
ಗಾಯಾಳು ಪ್ರವಾಸಿಗರನ್ನು ರಾಜಸ್ಥಾನದ ಮೂಲದ ಫರಹಾ ಮತ್ತು ತಬರೇಜ್ ಎಂದು ಗುರುತಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಅನಂತ್‌ನಾಗ್ ಹಾಗೂ ಶೋಪಿಯಾನ್ ಪ್ರದೇಶಗಳನ್ನು ಭದ್ರತಾ ಪಡೆ ಸುತ್ತುವರಿದಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯನ್ನು ಬಿಜೆಪಿ, ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಖಂಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.