ಅಹಮದಾಬಾದ್: ಭಾರತದ ಆಂತರಿಕ ವಿಷಯಗಳ ಕುರಿತು ಅನಗತ್ಯ ರಾಜಕೀಯ ಪ‍್ರೇರಿತ ಹೇಳಿಕೆ ನೀಡುವ ದೇಶಗಳಿಗೆ ಕಠಿಣ ಎಚ್ಚರಿಕೆ ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್, ‘ಇಂತಹ ಹಸ್ತಕ್ಷೇಪಗಳಿಗೆ ಬಲವಾದ ಪ್ರತ್ಯುತ್ತರ ನೀಡಲಾಗುವುದು’ ಎಂದು ಮಂಗಳವಾರ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ವಿಚಾರವಾಗಿ ಇತ್ತೀಚೆಗೆ ಅಮೆರಿಕ, ಜರ್ಮನಿ ಹಾಗೂ ವಿಶ್ವಸಂಸ್ಥೆಯ ರಾಯಭಾರಿಗಳು ನೀಡಿದ್ದ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರು ಅಂತರರಾಷ್ಟ್ರೀಯ ಸಮುದಾಯಕ್ಕೆ ಈ ಎಚ್ಚರಿಕೆ ನೀಡಿದ್ದಾರೆ.
‘ಕೇಜ್ರಿವಾಲ್ ಬಂಧನ ಕುರಿತು ವಿಶ್ವಸಂಸ್ಥೆ ಪ್ರತಿನಿಧಿಯೊಬ್ಬರಿಗೆ ಯಾರೋ ಪ್ರಶ್ನಿಸಿದರು. ಅದಕ್ಕೆ ಅವರು ಏನೋ ಉತ್ತರ ನೀಡಿದ್ದರು. ಇತರ ಹಲವು ಪ್ರಕರಣಗಳಿಗೆ ಈ ಹಿಂದೆಯೂ ಪ್ರತಿಕ್ರಿಯೆಗಳನ್ನು ನೀಡಲಾಗಿದೆ. ಆದರೆ, ಈ ರೀತಿ ಹೇಳಿಕೆ ನೀಡುವುದು ಹಳೆಯ ಮತ್ತು ಕೆಟ್ಟ ಚಾಳಿ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಪ್ರತಿಯೊಂದು ದೇಶದ ಸಾರ್ವಭೌಮತೆಯನ್ನು ಗೌರವಿಸುವುದು ಮುಖ್ಯ’ ಎಂದ ಅವರು, ‘ದೇಶಗಳು ಪರಸ್ಪರರ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಬಾರದು’ ಎಂದೂ ಹೇಳಿದರು.
‘ಅಂತರರಾಷ್ಟ್ರೀಯ ಸಂಬಂಧಗಳ ವಿಷಯ ಬಂದಾಗ, ಕೆಲ ಶಿಷ್ಟಾಚಾರಗಳು, ಸಂಪ್ರದಾಯಗಳು ಹಾಗೂ ಒಪ್ಪಂದಗಳಿರುತ್ತವೆ. ಅವುಗಳನ್ನು ಎಲ್ಲ ದೇಶಗಳು ಪಾಲನೆ ಮಾಡುವುದು ಮುಖ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.