ನವದೆಹಲಿ: ಜಿಯೊದಿಂದ ಬೇರೆ ನೆಟ್‌ವರ್ಕ್‌ಗೆ ವಾಯ್ಸ್ ಕಾಲ್ ಮಾಡಿದರೆಗ್ರಾಹಕರು ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ತೆರಬೇಕಾಗುತ್ತದೆ. ಬುಧವಾರದಿಂದ ರಿಚಾರ್ಜ್ ಮಾಡುವ ಗ್ರಾಹಕರಿಗೆ ಇದು ಅನ್ವಯವಾಗಲಿದೆ.
ಆದರೆ, ಇದೇ ಮೊತ್ತದ ಉಚಿತ ಡೇಟಾ ನೀಡುವ ಮೂಲಕ ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳುವುದಾಗಿ ಜಿಯೊ ತಿಳಿಸಿದೆ.
ಜಿಯೊದಿಂದ ಜಿಯೊಗೆ, ಸ್ಥಿರ ದೂರವಾಣಿಗೆ ಮತ್ತು ವಾಟ್ಸ್‌ಆ್ಯಪ್, ಫೇಸ್‌ಟೈಮ್ ಮತ್ತು ಇನ್ನಿತರ ಆ್ಯಪ್ ಮೂಲಕ ಕರೆ ಮಾಡಿದರೆ ಅದಕ್ಕೆ ಶುಲ್ಕ ಇರುವುದಿಲ್ಲ. ಒಳಬರುವ (ಇನ್‌ಕಮಿಂಗ್) ಕರೆಗಳು ಸಂಪೂರ್ಣವಾಗಿ ಉಚಿತವಾಗಿವೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) 2017ರಲ್ಲಿ ಮೊಬೈಲ್ ಅಂತರ್‌ಸಂಪರ್ಕ ಬಳಕೆ ಶುಲ್ಕವನ್ನು (ಐಯುಸಿ–ಜಿಯೊದಿಂದ ಐಡಿಯಾ ಅಥವಾ ಬೇರಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿದಾಗ ವಿಧಿಸುವ ಶುಲ್ಕ) ಪ್ರತಿ ಸೆಕೆಂಡಿಗೆ 14 ಪೈಸೆಯಿಂದ 6 ಪೈಸೆಗೆ ಇಳಿಕೆ ಮಾಡಿತ್ತು. 2020ರ ಜನವರಿಯಿಂದ ಈ ಶುಲ್ಕ ಇರುವುದಿಲ್ಲ ಎಂದೂ ಹೇಳಿತ್ತು. ಆದರೆ, ಗಡುವು ವಿಸ್ತರಣೆ ವಿಸ್ತರಿಸಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದೆ.
ಜಿಯೊ ಆರಂಭವಾದಾಗಿನಿಂದ ವಾಯ್ಸ್ ಕಾಲ್ ಉಚಿತವಾಗಿದೆ. ಹೀಗಾಗಿ ಕಂಪನಿಯು ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್–ಐಡಿಯಾಗೆ ಶುಲ್ಕ ರೂಪದಲ್ಲಿ ₹ 13,500 ಕೋಟಿ ಪಾವತಿಸಬೇಕಾಗಿದೆ. ಇದನ್ನು ತುಂಬಿಕೊಳ್ಳಲು ತನ್ನ ಪ್ರತಿಸ್ಪರ್ಧಿ ಕಂಪನಿಗಳ ನೆಟ್‌ವರ್ಕ್‌ಗೆ ಕರೆ ಮಾಡುವುದಕ್ಕೆ ಶುಲ್ಕ ವಿಧಿಸಲು ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.