ADVERTISEMENT

ಭಾರಿ ಭೂಕುಸಿತ | ಆಗಸದೆತ್ತರಕ್ಕೆ ಆವರಿಸಿದ ಧೂಳಿನ ಮೋಡ: ಬದರಿನಾಥ್ ಹೆದ್ದಾರಿ ಬಂದ್

ಪಿಟಿಐ
Published 10 ಜುಲೈ 2024, 13:52 IST
Last Updated 10 ಜುಲೈ 2024, 13:52 IST
   

ಗೋಪೇಶ್ವರ್: ಉತ್ತರಾಖಂಡದ ಫೀಪಾಲ್‌ಕೋಟಿ ಮತ್ತು ಜೋಶಿಮಠದ ನಡುವಿನ ಪಾತಾಳಗಂಗೆ ಬಳಿ ಭಾರಿ ಭೂಕುಸಿತ ಸಂಭವಿಸಿದ್ದು, ಬದರಿನಾಥ ರಾಷ್ಟ್ರೀಯ ಹೆದ್ದಾರಿ ಮತ್ತೆ ಬಂದ್ ಆಗಿದೆ.

ಭೂಕುಸಿತದ ಪರಿಣಾಮ ಭಾರಿ ಪ್ರಮಾಣದ ಧೂಳು ಆವರಿಸಿದ್ದರಿಂದ ಗೋಚರತೆಗೆ ಕೆಲಕಾಲ ಅಡ್ಡಿ ಉಂಟಾಯಿತು.

ಬುಧವಾರ ಬೆಳಿಗ್ಗೆ 11.15ರ ಸುಮಾರಿಗೆ ಯಾವುದೇ ಮಳೆ ಇಲ್ಲದಿದ್ದರೂ ಪಾತಾಳಗಂಗೆ ಬಳಿ ಬೃಹತ್ ಪ್ರಮಾಣದ ಪರ್ವತದ ಒಂದು ಭಾಗ ಕುಸಿದಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ ಹೇಳಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿಯ ಸುರಂಗದ ಬಳಿ ಕುಸಿತ ಸಂಭವಿಸಿದೆ. ಲಕ್ಷಾಂತರ ಟನ್ ಮಣ್ಣು, ಕಲ್ಲುಗಳು ಮತ್ತು ಬಂಡೆಗಳು ಉರುಳಿರುವುದರಿಂದ ಸದ್ಯ ಸಂಚಾರ ಆರಂಭವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

ಸಣ್ಣ ಪ್ರಮಾಣದ ಭೂಕುಸಿತಗಳಿಂದಾಗಿ ಕೆಲ ದಿನಗಳಿಂದ ಬದರಿನಾಥ್ ಹೆದ್ದಾರಿ ಬಂದ್ ಆಗಿತ್ತು. ಈಗ ಬೃಹತ್ ಕುಸಿತ ಸಂಭವಿಸಿದೆ.

ಈ ಪ್ರದೇಶದಲ್ಲಿ ಪದೇ ಪದೇ ಸಂಭವಿಸುತ್ತಿದ್ದ ಭೂಕುಸಿತದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುರಂಗ ನಿರ್ಮಾಣ ಮಾಡಲಾಗಿತ್ತು. ಸುರಂಗದ ಪ್ರವೇಶ ದ್ವಾರದಲ್ಲೇ ಭೂಕುಸಿದ ಮಣ್ಣು, ಕಲ್ಲುಗಳು ತುಂಬಿಕೊಂಡಿವೆ.

ಇದು ಅತ್ಯಂತ ಪ್ರಬಲವಾದ ಭೂಕುಸಿತವಾಗಿದ್ದು, ಸಂಪೂರ್ಣ ಅಲಕಾನಂದ ಮತ್ತು ಪಾತಾಳಗಂಗೆ ಕಣಿವೆಯು ಕೆಲ ಕಾಲ ಕಂಪಿಸುತ್ತಿತ್ತು ಎಂದು ಲಾಂಜಿ ಹಳ್ಳಿಯ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಬದರಿನಾಥ್ ವಿಧಾನಸಭೆ ಉಪಚುನಾವಣೆಗೆ ಮತದಾನ ಮಾಡಲು ಹೋಗುತ್ತಿದ್ದ ಜನ ಗಾಬರಿಯಿಂದ ಓಡಿದ್ದಾರೆ. ಭಯದಲ್ಲೂ ಆಗಸದೆತ್ತರಕ್ಕೆ ಆವರಿಸಿದ್ದ ಭೂಕುಸಿತದ ಉಂಟಾದ ಧೂಳಿನ ಮೋಡಗಳನ್ನು ನೋಡುತ್ತಾ ನಿಂತಿದ್ದಾರೆ. ಕೆಲ ಸಮಯದವರೆಗೆ ಇಡೀ ಪ್ರದೇಶವೇ ಧೂಳಿನ ಮೋಡಗಳಿಂದ ಆವೃತ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.