ಕರೀಂಗಂಜ್: ‘ಭೂಮಿ ಫಲವತ್ತಾಗಿರುವಾಗಲೇ ಉಳುಮೆ ಮಾಡಬೇಕು, ಹೀಗಾದ್ರೆ ಮಾತ್ರ ಉತ್ತಮ ಫಸಲು ತೆಗೆಯಲು ಸಾಧ್ಯ. – ಮುಸ್ಲಿಮರ ಜನಸಂಖ್ಯೆ ಹೆಚ್ಚಲು ಕಾರಣ ಏನು ಎನ್ನುವ ಪ್ರಶ್ನೆಗೆ ಎಐಡಿಯುಎಫ್ ಮುಖಸ್ಥ ಹಾಗೂ ಸಂಸದ ಬದ್ರುದ್ದೀನ್ ಅಜ್ಮಲ್ ಉತ್ತರಿಸಿದ ಪರಿ ಇದು.
‘ಮುಸ್ಲಿಂ ಯುವಕರು 20–22 ನೇ ವರ್ಷದಲ್ಲಿ ಹಾಗೂ ಯುವತಿಯರು 18ನೇ ವಯಸ್ಸಿಗೆ ವಿವಾಹವಾಗುತ್ತಾರೆ. ಇನ್ನೊಂದು ಕಡೆ, ಅವರು (ಹಿಂದೂಗಳು) ಮದುವೆಗೂ ಮುಂಚೆ ಒಂದು, ಎರಡು ಅಥವಾ ಮೂವರು ಅನೈತಿಕ ಪತ್ನಿಯರನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳನ್ನು ಪಡೆಯವುದಿಲ್ಲ. ಅವರಷ್ಟಕ್ಕೆ ಸಂತೋಷಪಡುತ್ತಾ, ಹಣ ಉಳಿಸುತ್ತಾರೆ‘ ಎಂದು ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಜನಸಂಖ್ಯೆ ಹೆಚ್ಚಳವಾಗುತ್ತಿದೆಯಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಿಂದೂಗಳ ಪೋಷಕರ ಒತ್ತಡದಿಂದ 40 ವರ್ಷದ ಬಳಿಕ ವಿವಾಹವಾಗುತ್ತಾರೆ. ಹೀಗಾದರೆ 40 ವರ್ಷಗಳ ಬಳಿಕ ಮಕ್ಕಳಾಗಬೇಕು ಎಂದರೆ ಹೇಗೆ? ಫಲವತ್ತಾದ ಭೂಮಿ ಉಳುಮೆ ಮಾಡಿದರೆ ಮಾತ್ರ ಉತ್ತಮ ಫಲ ತೆಗೆಯಲು ಸಾಧ್ಯ‘ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಬೇಗನೇ ವಿವಾಹವಾಗಿ, ಮಕ್ಕಳ ಪಡೆಯುವ ‘ಮುಸ್ಲಿಂ ಫಾರ್ಮುಲಾ‘ವನ್ನು ಹಿಂದೂಗಳು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
‘ಅವರ ಯುವಕರು 20–22ನೇ ವರ್ಷದಲ್ಲಿ, ಯುವತಿಯರು 18–20ನೇ ವಯಸ್ಸಿನಲ್ಲಿ ವಿವಾಹವಾಗಲಿ. ಬಳಿಕ ಫಲಿತಾಂಶ ನೋಡಲಿ‘ ಎಂದು ಅಜ್ಮಲ್ ಹೇಳಿದ್ದಾರೆ.
ದೆಹಲಿಯ ಶ್ರದ್ಧಾ ವಾಲಕರ್ ಕೊಲೆ ಪ್ರಕರಣವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಶರ್ಮಾ ಅವರು ‘ಲವ್ ಜಿಹಾದ್‘ಗೆ ಹೋಲಿಕೆ ಮಾಡಿದ್ದಾರಲ್ವಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿ ಅವರು ಈಗ ನಮ್ಮ ದೇಶದ ಪ್ರಮುಖ ನಾಯಕರು. ನೀವು ಕೂಡ ನಾಲ್ಕರಿಂದ ಐದು ಲವ್ ಜಿಹಾದ್ ಮಾಡಿ ಮುಸ್ಲಿಂ ಹುಡುಗಿಯರನ್ನು ತೆಗೆದುಕೊಂಡು ಹೋಗಿ. ನಿಮ್ಮನ್ನು ತಡೆಯುವವರು ಯಾರು? ನಾವು ಅದನ್ನು ಸ್ವಾಗತ ಮಾಡುತ್ತೇವೆ. ನಿಮಗೆ ಎಷ್ಟು ಶಕ್ತಿ ಇದೆ ಎನ್ನುವುದನ್ನು ನಾವು ನೋಡುತ್ತೇವೆ‘ ಎಂದು ಬದ್ರುದ್ದೀನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.