ನವದೆಹಲಿ: ‘ಜಾಮೀನು ಎಂಬುದು ಹಕ್ಕು, ಜೈಲು ಶಿಕ್ಷೆ ವಿನಾಯಿತಿ’ ಎಂಬ ನ್ಯಾಯವ್ಯವಸ್ಥೆಯ ತತ್ವವು ಹಣ ಅಕ್ರಮ ವರ್ಗಾವಣೆ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದಿರುವ ಸುಪ್ರೀಂ ಕೋರ್ಟ್, ಜಾರ್ಖಂಡ್ ಮುಖ್ಯಮಂತ್ರಿಯ ಆಪ್ತ ಎನ್ನಲಾದ ಪ್ರೇಮ್ ಪ್ರಕಾಶ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ.
‘ಜಾಮೀನು ಎಂಬುದು ಹಕ್ಕು, ಜೈಲು ಶಿಕ್ಷೆ ವಿನಾಯಿತಿ’ ಎಂಬ ನ್ಯಾಯವ್ಯವಸ್ಥೆಯ ತತ್ವವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹೇಳಿದೆ.
ಯಾವುದೇ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬಾರದು ಎಂದಿರುವ ಪೀಠ, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯ ಜಾಮೀನಿಗೆ ಅವಳಿ ಷರತ್ತುಗಳನ್ನು ವಿಧಿಸಿರುವ ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 45 ಈ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದೆ.
ಹಣ ಅಕ್ರಮ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಆಗಸ್ಟ್ 9ರಂದು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ನೀಡಲಾದ ಜಾಮೀನಿನ ವಿಚಾರ ಉಲ್ಲೇಖಿಸಿದ ನ್ಯಾಯಪೀಠವು, ವ್ಯಕ್ತಿಯ ಸ್ವಾತಂತ್ರ್ಯ ಒಂದು ನಿಯಮ. ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದ ಮೂಲಕ ಅದರ ನಿಗ್ರಹವು ಒಂದು ವಿನಾಯಿತಿ ಎಂದು ಹೇಳಿದೆ.
‘ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 45ರ ಅಡಿಯ ಷರತ್ತುಗಳು ಈ ತತ್ವವನ್ನು ನಿಗ್ರಹಿಸುವುದಿಲ್ಲ’ಎಂದು ಹೇಳಿದೆ.
ಇದೇವೇಳೆ, ಪ್ರೇಮ್ ಪ್ರಕಾಶ್ ಅವರಿಗೆ ಜಾಮೀನು ನಿರಾಕರಿಸಿ, ವಿಚಾರಣೆ ತ್ವರಿತಗೊಳಿಸುವಂತೆ ಆಗಸ್ಟ್ 22ರಂದು ಜಾರ್ಖಂಡ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.