ನವದೆಹಲಿ: ಬಾಲಾಕೋಟ್ ಸಮೀಪ ಜೈಷ್ ಎ ಮೊಹಮ್ಮದ್ ಉಗ್ರರ ಶಿಬಿರದ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಭಾರತೀಯ ವಾಯುಪಡೆಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ:ಜೆಇಎಂ ಉಗ್ರರ ಕಟ್ಟಡಗಳು ಈಗಲೂ ಸದೃಢ
ದಾಳಿಯನ್ನು ಕರಾರುವಾಕ್ಕಾಗಿ ನಡೆಸಲು ಬಳಸಿದ್ದ ರೇಡಾರ್ ದತ್ತಾಂಶಗಳು ಮತ್ತು ದಾಳಿಯ ನಂತರ ತೆಗೆಯಲಾದ ಉಪಗ್ರಹ ಚಿತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಉಪಗ್ರಹ ಚಿತ್ರಗಳು ಹೆಚ್ಚು ಸ್ಪಷ್ಟವಾಗಿವೆ. ದಾಳಿಗೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಸರ್ಕಾರಕ್ಕೆ ಒದಗಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಮಿರಾಜ್–2000 ಯುದ್ಧವಿಮಾನದ ಮೂಲಕ ಉಡಾಯಿಸಲಾಗಿದ್ದ ಸ್ಪೈಸರ್–2000 ಬಾಂಬ್‌ಗಳು ಕರಾರುವಾಕ್ಕಾಗಿ ಗುರಿಯನ್ನು ತಲುಪಿವೆ. ಉಗ್ರರು ತಂಗಿದ್ದ ಕಟ್ಟಡಗಳ ಚಾವಣಿಯನ್ನು ತೂರಿಕೊಂಡು ಒಳನುಗ್ಗಿವೆ. ನಂತರ ಸ್ಫೋಟಿಸಿವೆ. ಇದರಿಂದ ಭಾರಿ ಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನೂ ವಾಯುಪಡೆಯು ಸರ್ಕಾರಕ್ಕೆ ನೀಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಭಾರತದ ವಾಯುಪಡೆ ಯುದ್ಧವಿಮಾನಗಳು ಹಾಕಿದ ಬಾಂಬ್‌ಗಳು ಗುರಿತಪ್ಪಿವೆ. ಉಗ್ರರ ಶಿಬಿರಗಳು ಸುಸ್ಥಿತಿಯಲ್ಲೇ ಇವೆ ಎಂದು ರಾಯಿಟರ್ಸ್ ವರದಿ ಮಾಡಿದ ಬೆನ್ನಲ್ಲೇ ವಾಯುಪಡೆ ಈ ಸಾಕ್ಷ್ಯಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದೆ.
ದಾಳಿ ಪರಿಣಾಮ; ಭಿನ್ನ ಹೇಳಿಕೆಗಳು:‘ದಾಳಿಯಿಂದ ಉಗ್ರರ ನೆಲೆಗೆ ಭಾರಿ ಹಾನಿಯಾಗಿದೆ. 350ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ’ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.
ದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು.
ದಾಳಿ ನಡೆಸಿದ ಸ್ಥಳದಲ್ಲಿ 300ಕ್ಕೂ ಹೆಚ್ಚು ಮೊಬೈಲ್‌ಗಳು ಸಕ್ರಿಯವಾಗಿದ್ದವು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.