ADVERTISEMENT

ಎಲ್ಲ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ‘ಅಸಹಿಷ್ಣುತೆ’ ಪ್ರದರ್ಶಿಸಲಿ: ಸುಷ್ಮಾ

ರಷ್ಯಾ–ಭಾರತ–ಚೀನಾ ದೇಶದ ವಿದೇಶಾಂಗ ಸಚಿವರುಗಳ 16ನೇ ಸಮಾವೇಶ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2019, 6:51 IST
Last Updated 27 ಫೆಬ್ರುವರಿ 2019, 6:51 IST
   

ವುಜೆನ್‌(ಚೀನಾ): ಪುಲ್ವಾಮಾ ದಾಳಿಯಂತಹಕಠೋರವಾದ ಕೃತ್ಯಗಳಿಗೆ ಪ್ರತಿಯಾಗಿ ಎಲ್ಲ ರಾಷ್ಟ್ರಗಳು ಭಯೋತ್ಪಾದನೆಯ ಬಗ್ಗೆ ‘ಅಸಹಿಷ್ಣುತೆ’ ಪ್ರದರ್ಶಿಸಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಷ್‌–ಎ–ಮೊಹಮದ್‌ ಸಂಘಟನೆಯ ನೆಲೆಗಳ ಮೇಲೆ ದಾಳಿ ನಡೆಸಿದ ಒಂದು ದಿನದ ಬಳಿಕ ಹೀಗೆ ಪ್ರತಿಕ್ರಿಯಿಸಿದ್ದಾರೆ.ಇಲ್ಲಿ ನಡೆಯುತ್ತಿರುವ ‘ರಷ್ಯಾ–ಭಾರತ–ಚೀನಾ ದೇಶದ ವಿದೇಶಾಂಗ ಸಚಿವರುಗಳ 16ನೇ ಸಮಾವೇಶ’ದಲ್ಲಿ ಅವರು ಮಾತನಾಡಿದರು. ಈ ವೇಳೆ ರಷ್ಯಾ ಹಾಗೂ ಚೀನಾದ ವಿದೇಶಾಂಗ ಸಚಿವರಾದ ಸೆರ್ಗಿ ಲಾವ್‌ರೌ, ವಾಂಗ್‌ ಇ ಉಪಸ್ಥಿತರಿದ್ದರು.

‘ತನ್ನ ಪ್ರದೇಶದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳಲು ಪಾಕಿಸ್ತಾನ ನಿರಾಕರಿಸುತ್ತಿದೆ. ಅದಲ್ಲದೆ ಭಾರತದ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಲು ಜೆಇಎಂ ಯೋಜನೆ ರೂಪಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಕಾರಣ ‘ಮುನ್ನೆಚ್ಚರಿಕಾ ಕ್ರಮ’ ಕೈಗೊಳ್ಳಲು ಭಾರತ ಸರ್ಕಾರ ನಿರ್ಧರಿಸಿತು’ ಎನ್ನುವ ಮೂಲಕ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ಫೆಬ್ರುವರಿ 14ರಂದು ಜೈಷ್‌–ಎ–ಮೊಹಮ್ಮದ್‌(ಜೆಇಎಂ) ಉಗ್ರರು ನಡೆಸಿದ ದಾಳಿವೇಳೆ ಸಿಆರ್‌ಪಿಎಫ್‌ನ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ಸಂಬಂಧ ಹರಿಹಾಯ್ದ ಸುಷ್ಮಾ, ‘ದೌರ್ಜನ್ಯಕಾರಿಯಾದ ಇಂತಹ ಉಗ್ರ ಕೃತ್ಯಗಳು ಕಠೋರವಾದುವು. ಭಯೋತ್ಪಾದನೆಯ ಬಗ್ಗೆ ಎಲ್ಲ ರಾಷ್ಟ್ರಗಳು ಅಸಹಿಷ್ಣುತೆ ಪ್ರದರ್ಶಿಸಬೇಕು ಮತ್ತು ಅದರ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು’ಎಂದು ಕರೆ ನೀಡಿದರು.

ಮುಂದುವರಿದು, ‘ಪುಲ್ವಾಮಾ ದಾಳಿ ಬಳಿಕ ಜೆಇಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತರರಾಷ್ಟ್ರೀಯ ಸಮುದಾಯವು ಒತ್ತಾಯಿಸಿತ್ತು. ಆದಾಗ್ಯೂ ಪಾಕಿಸ್ತಾನ ದಾಳಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ’ ಎಂದು ಆರೋಪಿಸಿದರು.

ಭಾರತೀಯ ವಾಯುಪಡೆಯು ಜೆಇಎಂ ಸಂಘಟನೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಹೊಂದಿದ್ದ ಪ್ರಮುಖ ತರಬೇತಿ ಕೇಂದ್ರವನ್ನು ಗುರಿಯಾಗಿರಿಸಿ ಮಂಗಳವಾರ ಬೆಳಗ್ಗಿನ ಜಾವ 3.45ಕ್ಕೆ ದಾಳಿ ಮಾಡಿತ್ತು. ದಾಳಿ ವೇಳೆ ನಾಗರಿಕರಿಗೆ ತೊಂದರೆಯಾಗದಂತೆ ಹಾಗೂ ಕೇವಲ ಉಗ್ರರನ್ನು ಗುರಿಯಾಗಿರಿಸಿ ಕಾರ್ಯಾಚರಣೆ ನಡೆಸಲಾಯಿತು ಎಂದೂ ಸ್ಪಷ್ಟಪಡಿಸಿದ್ದಾರೆ.

‘ಅದು ಸೇನಾ ಕಾರ್ಯಾಚರಣೆಯಲ್ಲ. ಸೇನೆಯ ಯಾರೊಬ್ಬರೂ ನಮ್ಮ ಗುರಿಯಾಗಿರಲಿಲ್ಲ. ಭಾರತದಲ್ಲಿ ಮತ್ತಷ್ಟು ದಾಳಿ ಮಾಡಲು ಯೋಜನೆ ರೂಪಿಸಿದ್ದ ಜೆಇಎಂನ ಉದ್ದೇಶವನ್ನು ವಿಫಲಗೊಳಿಸಲು‘ಮುನ್ನೆಚ್ಚರಿಕಾ ಕ್ರಮ’ವಾಗಿ ಉಗ್ರರನ್ನು ಗುರಿಯಾಗಿರಿಸಿ ಶಿಬಿರಗಳ ಮೇಲೆ ದಾಳಿ ನಡೆಸಲಾಯಿತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.