ನವದೆಹಲಿ: ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಷ್–ಎ–ಮೊಹಮ್ಮದ್ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತದ ವಾಯು ಪಡೆ(ಐಎಎಫ್) ಎಂಟು ತಿಂಗಳ ಹಿಂದೆ ದಾಳಿ ಮಾಡಿತ್ತು. ಇದೀಗ ಅದೇ ಸ್ಥಳದಲ್ಲಿ 45–50 ಮಂದಿ ಕಟ್ಟಾ ಉಗ್ರರು ಹಾಗೂ ಆತ್ಮಾಹುತಿ ದಾಳಿಕೋರರು ತರಬೇತಿ ಪಡೆಯುತ್ತಿದ್ದಾರೆ.
’ಬಾಲಾಕೋಟ್‌ನ ಜೈಷ್–ಎ–ಮೊಹಮ್ಮದ್ ಉಗ್ರರ ಶಿಬಿರದಲ್ಲಿ ಸುಮಾರು 45–50 ಮಂದಿ ಆತ್ಮಾಹುತಿ ಬಾಂಬ್ ದಾಳಿಗೆ ತರಬೇತಿ ಪಡೆಯುವುದರಲ್ಲಿ ನಿರತರಾಗಿದ್ದಾರೆ‘ ಎಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದುಬಂದಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಇದನ್ನೂ ಓದಿ:ಬಾಲಾಕೋಟ್ ಹೀರೊಗೆ ವೀರಚಕ್ರ
ಭಾರತದ ಗುಪ್ತಚರ ಸಂಸ್ಥೆಗಳು ಉಗ್ರರ ಶಿಬಿರದ ಮೇಲೆ ನಿರಂತರ ನಿಗಾವಹಿಸಿವೆ. ತಾಂತ್ರಿಕ ಕಣ್ಗಾವಲಿನ ಮೂಲಕ ಪ್ರತಿ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ. ಬಾಲಾಕೋಟ್ ಶಿಬಿರದಲ್ಲಿ ತರಬೇತಿ ಪಡೆದಿರುವ ಉಗ್ರರ ಪೈಕಿ ಕೆಲವರನ್ನು ಕಾಶ್ಮೀರಕ್ಕೂ ಕಳುಹಿಸಲಾಗಿದ್ದು, ಅಲ್ಲಿ ಭಾರತೀಯ ಭದ್ರತಾ ನೆಲೆಗಳ ಮೇಲೆ ದಾಳಿ ನಡೆಸಲು ಪ್ರೇರೇಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವರ್ಷ ಫೆಬ್ರುವರಿಯಲ್ಲಿ ಭಾರತೀಯ ವಾಯು ಪಡೆ ದಾಳಿ ನಡೆಸಿದ ನಂತರದ ಆರು ತಿಂಗಳ ವರೆಗೂ ಆ ಶಿಬಿರ ಸ್ಥಗಿತಗೊಂಡಿತ್ತು. ಆದರೆ, ಉಗ್ರ ಶಿಬಿರ ಮತ್ತೆ ಚಟುವಟಿಕೆ ಆರಂಭಿಸಿದೆ ಎಂದು ಕಳೆದ ತಿಂಗಳು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಬಹಿರಂಗ ಪಡಿಸಿದ್ದರು.
ಫೆಬ್ರುವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿಯಿಂದ 40 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾದರು. ಭಾರತೀಯ ವಾಯುಪಡೆ ಫೆಬ್ರುವರಿ 26ರಂದು ಪಾಕಿಸ್ತಾನ ವಾಯು ಪ್ರದೇಶದ ಒಳಗೆ ಸಾಗಿ ಬಾಲಾಕೋಟ್‌ನ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿತು.
ಇನ್ನಷ್ಟು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.