ADVERTISEMENT

ಲಖನೌ ವಿವಿ ರಕ್ಷಣಾ ಅಧ್ಯಯನದಲ್ಲಿ ಪುಲ್ವಾಮಾ, ಬಾಲಾಕೋಟ್ ದಾಳಿ, ಸರ್ಜಿಕಲ್‌ ಸ್ಟ್ರೈಕ್‌

ಐಎಎನ್ಎಸ್
Published 16 ಮೇ 2023, 4:13 IST
Last Updated 16 ಮೇ 2023, 4:13 IST
ಪುಲ್ವಾಮಾ ದಾಳಿ ಸಂದರ್ಭ ಫೈಲ್ ಫೋಟೊ
ಪುಲ್ವಾಮಾ ದಾಳಿ ಸಂದರ್ಭ ಫೈಲ್ ಫೋಟೊ   

ಲಖನೌ: 2019ರಲ್ಲಿ ನಡೆದಿದ್ದ ಪುಲ್ವಾಮಾ ದಾಳಿ, ಬಾಲಾಕೋಟ್ ಮೇಲಿನ ವೈಮಾನಿಕ ದಾಳಿ ಮತ್ತು 2016ರ ಸರ್ಜಿಕಲ್ ಸ್ಟ್ರೈಕ್‌ಗಳು ಲಖನೌ ವಿಶ್ವವಿದ್ಯಾಲಯದ 2023-24ರ ಶೈಕ್ಷಣಿಕ ಸಾಲಿನ ‘ರಕ್ಷಣಾ ಅಧ್ಯಯನ’ಗಳ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿವೆ.

ಪಠ್ಯಕ್ರಮಕ್ಕೆ ಈ ವಿಷಯಗಳನ್ನು ಸೇರ್ಪಡೆ ಮಾಡಲು ರಕ್ಷಣಾ ಅಧ್ಯಯನ ವಿಭಾಗದ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಬಿ.ಎ. ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ.

ರಕ್ಷಣಾ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಒ.ಪಿ.ಶುಕ್ಲಾ ಮಾತನಾಡಿ, ‘2016ರ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಬಾಲಾಕೋಟ್ ವೈಮಾನಿಕ ದಾಳಿಯನ್ನು ಹೊಸ ಶಿಕ್ಷಣ ನೀತಿಯ ಪ್ರಕಾರ ರಕ್ಷಣಾ ಅಧ್ಯಯನ ಪಠ್ಯಕ್ರಮದಲ್ಲಿ ‘ರಾಷ್ಟ್ರ ಮೊದಲು: ರಾಷ್ಟ್ರೀಯ ಭದ್ರತೆ ಬಗ್ಗೆ ಎರಡನೇ ಚಿಂತನೆಯೇ ಇಲ್ಲ’ ಎಂಬ ಶೀರ್ಷಿಕೆಯಡಿ ಸೇರಿಸಲಾಗಿದೆ. ಪುಲ್ವಾಮಾ ದಾಳಿಯ ಬಗ್ಗೆಯೂ ಅಧ್ಯಯನ ನಡೆಸಲಿದೆ’ ಎಂದು ವಿವರಿಸಿದರು.

ADVERTISEMENT

‘2019 ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಬಾಲಾಕೋಟ್‌ ಮೇಲೆ ವೈಮಾನಿಕ ದಾಳಿ ನಡೆಸಿತ್ತು ಎಂದು ಪಠ್ಯದಲ್ಲಿ ಸೇರಿಸಲಾಗಿದೆ. ಕಾರ್ಯಾಚರಣೆಗೆ ಆಪರೇಷನ್ ‘ಬಂದರ್’ ಎಂಬ ಹೆಸರು ನೀಡಲಾಗಿತ್ತು ಎಂಬುದನ್ನು ಪಠ್ಯದಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ, 2016ರ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರತಿ ವಿವರವನ್ನು ವಿದ್ಯಾರ್ಥಿಗಳಿಗೆ ಹೇಳಲಾಗುತ್ತದೆ. 1984ರ ಭೋಪಾಲ್ ಅನಿಲ ದುರಂತವನ್ನೂ ಪಠ್ಯಕ್ರಮದಲ್ಲಿ ಸೇರಿಸಿದ್ದೇವೆ’ ಎಂದು ಅವರು ತಿಳಿಸಿದರು.

ಹೊಸ ಶಸ್ತ್ರಾಸ್ತ್ರಗಳು, ರಾಸಾಯನಿಕ ಮತ್ತು ಜೈವಿಕ ತಂತ್ರಜ್ಞಾನದ ಪಾತ್ರ– ಸೈನ್ಯದೊಂದಿಗಿನ ಅದರ ಸಂಬಂಧ, ಮಿಲಿಟರಿ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ ಎಂದು ಅವರು ಹೇಳಿದರು.

ಈ ಹಿಂದೆ, ಉತ್ತರ ಪ್ರದೇಶ ಸರ್ಕಾರವು ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ರಕ್ಷಣಾ ಅಧ್ಯಯನದ ಪಠ್ಯಕ್ರಮವನ್ನು ತಿದ್ದುಪಡಿ ಮಾಡಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್‌ನ ವಿಷಯಗಳನ್ನು ಸೇರಿಸಲು ನಿರ್ದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.