ADVERTISEMENT

ತಮಿಳುನಾಡು, ಬಾಲೇಶ್ವರ ರೈಲು ದುರಂತಕ್ಕಿದೆ ಸಾಮ್ಯತೆ: ತಜ್ಞರು ಹೇಳಿದ್ದೇನು?

ಪಿಟಿಐ
Published 12 ಅಕ್ಟೋಬರ್ 2024, 12:31 IST
Last Updated 12 ಅಕ್ಟೋಬರ್ 2024, 12:31 IST
<div class="paragraphs"><p>ಬಲೇಶ್ವರ ರೈಲು ದುರಂತದ ನೋಟ</p></div>

ಬಲೇಶ್ವರ ರೈಲು ದುರಂತದ ನೋಟ

   

–ಪಿಟಿಐ ಚಿತ್ರ

ನವದೆಹಲಿ: ಶುಕ್ರವಾರ ರಾತ್ರಿ ತಮಿಳುನಾಡಿನ ಕವರೈಪೆಟ್ಟೈ ನಿಲ್ದಾಣದಲ್ಲಿ ನಡೆದ ರೈಲು ಅವಘಢ, 2023ರ ಜೂನ್‌ನಲ್ಲಿ ಒಡಿಶಾದ ಬಾಲೇಶ್ವರ ರೈಲು ದುರಂತವನ್ನೇ ಹೋಲುತ್ತಿದೆ. ಎರಡೂ ಘಟನೆಗಳಲ್ಲಿ ಪ್ರಯಾಣಿಕ ರೈಲು ಲೂಪ್‌ ಲೈನ್‌ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು.

ADVERTISEMENT

ಬಾಲೇಶ್ವರ ದುರಂತದಲ್ಲಿ ಅಪಾರ ಸಾವು ನೋವು ಉಂಟಾಗಿದ್ದರೆ, ಸುದೈವವಶಾತ್‌ ಈ ಅವಘಡದಲ್ಲಿ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ಮೈಸೂರು–ದರ್ಭಾಂಗ ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ರಾತ್ರಿ ಸುಮಾರು 8.30ಕ್ಕೆ ಚೆನ್ನೈ ರೈಲು ವಿಭಾಗದ ಕವರೈಪೆಟ್ಟೈ ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು.

ಡೇಟಾ ಲಾಗರ್‌ನಲ್ಲಿ (ನಿಲ್ದಾಣದಲ್ಲಿ ರೈಲುಗಳ ಸಂಚಾರ ಹಾಗೂ ಸಿಗ್ನಲ್ ವ್ಯವಸ್ಥೆ ಮೇಲೆ ನಿಗಾ ಇಡುವ ಸಾಧನ) ದಾಖಲಾಗಿರುವ ಘಟನೆಯ ವಿಡಿಯೊ ಶನಿವಾರ ಬೆಳಿಗ್ಗೆಯಿಂದ ರೈಲ್ವೆಯ ಹಿರಿಯ ಅಧಿಕಾರಿಗಳ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹಂಚಿಕೆಯಾಗುತ್ತಿದ್ದು, 2023ರ ಜೂನ್‌ 2ರಂದು ಬಾಲೇಶ್ವರದ ದುರಂತವನ್ನು ಹೋಲುವಂತಿದೆ.

ಈ ಬಗ್ಗೆ ದಕ್ಷಿಣ ರೈಲ್ವೆಯ ಸಾರ್ವಜನಿಕ ಸಂಪರ್ಕದ ಮುಖ್ಯ ಅಧಿಕಾರಿಯನ್ನು ವಿಚಾರಿಸಿದಾಗ, ವಿಡಿಯೊ ಬಗ್ಗೆ ಮಾಹಿತಿ ಇಲ್ಲ, ಘಟನೆಯ ಬಗ್ಗೆ ಕಾರಣ ತಿಳಿಯಲು ಹಲವು ತನಿಖೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ರೈಲಿಗೆ ಮುಖ್ಯ ಹಳಿಗೆ ಸಿಗ್ನಲ್ ನೀಡಲಾಗಿದ್ದರೂ, ಲೂಪ್‌ ಲೈನ್‌ಗೆ ಪ್ರವೇಶಿಸಿ ಅಲ್ಲಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ದಕ್ಷಿಣ ರೈಲ್ವೆ ಹೇಳಿತ್ತು.

ಬಾಲೇಶ್ವರದಲ್ಲೂ, ಹೌರಾಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲಿಗೆ ಮುಖ್ಯ ಹಳಿಗೆ ಸಿಗ್ನಲ್ ನೀಡಲಾಗಿತ್ತಾದರೂ, ಹಳಿ ಇಂಟರ್‌ಲಾಕಿಂಗ್‌ನಲ್ಲಿ ದೋಷ ಇದ್ದುದ್ದರಿಂದ ರೈಲು ಲೂಪ್‌ ಲೈನ್‌ಗೆ ಪ್ರವೇಶಿಸಿ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು.

‘ಸಾರ್ವಜನಿಕವಾಗಿ ಲಭ್ಯ ಇರುವ ಮಾಹಿತಿ ‍ಪ್ರಕಾರ ಈ ಘಟನೆ ಬಾಲೇಶ್ವರ ದುರಂತವನ್ನೇ ಹೋಲುತ್ತಿದೆ. ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿರುವ ದೋಷ ಪರಿಹರಿಸಲು ರೈಲ್ವೆ ಗಂಭೀರವಾಗಿ ಚಿಂತನೆ ನಡೆಸಬೇಕು’ ಎಂದು ದಕ್ಷಿಣ ರೈಲ್ವೆಯ ಅಖಿಲ ಭಾರತ ಲೊಕೊ ಚಾಲಕ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷ ಆರ್‌. ಕುಮಾರಸೇನ್ ಹೇಳಿದ್ದಾರೆ.

ಸಿಗ್ನಲಿಂಗ್ ವ್ಯವಸ್ಥೆ ಹಾಗೂ ಇಂಟರ್‌ಲಾಕಿಂಗ್‌ ವ್ಯವಸ್ಥೆ ನಡುವೆ ಹೊಂದಾಣಿಕೆ ಸಮಸ್ಯೆ ಇದ್ದಾಗ ಇಂಥ ಘಟನೆಗಳು ನಡೆಯುತ್ತವೆ, ಮೇಲ್ನೋಟಕ್ಕೆ ಇದೂ ಹಾಗೇ ಕಾಣಿಸುತ್ತದೆ ಎಂದು ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ಸುರಕ್ಷತಾ ತಜ್ಞರೊಬ್ಬರು ಹೇಳಿದ್ದಾರೆ.

ಈ ರೈಲಿಗೂ ಮುಂಚೆ ಹಾದು ಹೋದ ರೈಲುಗಳಿಗೆ ಸಿಗ್ನಲಿಂಗ್ ಅಥವಾ ಇಂಟರ್‌ಲಾಕಿಂಗ್ ವ್ಯವಸ್ಥೆಯಿಂದ ಯಾವುದೇ ತೊಂದರೆ ಉಂಟಾಗಿಲ್ಲ. ಬಾಲೇಶ್ವರದಲ್ಲಿ ಸಿಗ್ನಲಿಂಗ್ ದುರಸ್ತಿ ಕೆಲಸ ಆದ ಕೂಡಲೇ ದುರ್ಘಟನೆ ಸಂಭವಿಸಿತ್ತು. ಆದರೆ ಇಲ್ಲಿ ಎಲ್ಲವೂ ಸುಗಮವಾಗಿಯೇ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.