ನವದೆಹಲಿ: ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಸಂಘರ್ಷ ಹೆಚ್ಚಿದ ಬೆನ್ನಲ್ಲೇ, ಭಾರತ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿನ ಸ್ಥಿತಿಗತಿ ಕುರಿತು ಮೇಲ್ವಿಚಾರಣೆ ವಹಿಸಲು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಹಿರಿಯ ಅಧಿಕಾರಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ತಿಳಿಸಿದ್ದಾರೆ.
ಸಮಿತಿಯು ಬಾಂಗ್ಲಾದೇಶದ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಸಾಧಿಸಿ, ಅಲ್ಲಿರುವ ಹಿಂದೂಗಳು ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಭಾರತೀಯರ ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ಖಾತರಿಪಡಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
‘ಭಾರತ– ಬಾಂಗ್ಲಾದೇಶದ ಗಡಿ ಪರಿಸ್ಥಿತಿ ಮೇಲೆ ನಿಗಾವಹಿಸಲು ಮೋದಿ ಸರ್ಕಾರವು ಸಮಿತಿ ರಚಿಸಲು ನಿರ್ಧರಿಸಿದೆ. ಬಿಎಸ್‌ಎಫ್‌ನ ಪೂರ್ವ ಕಮಾಂಡ್‌ನ ಎಡಿಜಿ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ’ ಎಂದು ಶಾ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಲ್ಲದೇ, ಸೌತ್ ಬೆಂಗಾಲ್ ಫ್ರಾಂಟಿಯರ್ ಐಜಿಪಿ, ತ್ರಿಪುರ ಫ್ರಾಂಟಿಯರ್‌ನ ಐಜಿಪಿ, ಲ್ಯಾಂಡ್ ಪೋರ್ಟ್ ಆಥಾರಿಟಿ ಆಫ್ ಇಂಡಿಯಾದ ಕಾರ್ಯದರ್ಶಿ ಹಾಗೂ ಸದಸ್ಯರು ಈ ಸಮಿತಿಯಲ್ಲಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಮೊಹಮ್ಮದ್ ಯೂನುಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.