ಢಾಕಾ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ವಿಶೇಷವಾಗಿ ಬಳಸಲಾಗುವ ಹಿಲ್ಸಾ ಮೀನು ರಫ್ತಿಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ದುರ್ಗಾ ಪೂಜೆ ಅಕ್ಟೋಬರ್ 9ರಿಂದ 13ರವರೆಗೆ ನಡೆಯಲಿದೆ. ಈ ಸಂದರ್ಭಕ್ಕೆ ಅನುಕೂಲವಾಗುವಂತೆ 3 ಸಾವಿರ ಟನ್ ಹಿಲ್ಸಾ ಮೀನು ರಫ್ತಿಗೆ ಬಾಂಗ್ಲಾ ನಿರ್ಧರಿಸಿದೆ.
ಈ ಹಿಂದಿನ ಅವಾಮಿ ಲೀಗ್ ನೇತೃತ್ವದ ಸರ್ಕಾರದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಭಾರತಕ್ಕೆ ಪ್ರತಿ ವರ್ಷ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ ಹಿಲ್ಸಾ ಮೀನು ರಫ್ತಿಗೆ ಅನುಮೋದನೆ ನೀಡಿದ್ದರು. 2023ರಲ್ಲಿ ಹಿಲ್ಸಾ ಮೀನು ರಫ್ತಿಗೆ 79 ಕಂಪನಿಗಳಿಗೆ ಬಾಂಗ್ಲಾದೇಶ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಕಳೆದ ವರ್ಷ 4 ಸಾವಿರ ಟನ್ ಮೀನು ಭಾರತಕ್ಕೆ ರಫ್ತಾಗಿತ್ತು.
ಭಾರತದ ಆಮದುದಾರರ ಒಕ್ಕೂಟವು ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿಯ ಸಲಹೆಗಾರ ತೌಹಿದ್ ಹುಸೇನ್ ಅವರನ್ನು ಸಂಪರ್ಕಿಸಿ ಹಿಲ್ಸಾ ಮೀನು ರಫ್ತುಗೆ ಕೋರಿಕೆ ಸಲ್ಲಿಸಿತ್ತು. ಬಂಗಾಳಿಗಳ ದುರ್ಗಾ ಪೂಜೆಯಲ್ಲಿ ಹಿಲ್ಸಾ ಮೀನಿಗೆ ವಿಶೇಷ ಸ್ಥಾನ ಇರುವುದನ್ನು ಮನದಟ್ಟು ಮಾಡಿತ್ತು.
‘ಬಾಂಗ್ಲಾದೇಶದಲ್ಲಿ ವಿಶೇಷವಾಗಿ ಸಿಗುವ ಹಿಲ್ಸಾ ಮೀನಿನ ರಫ್ತಿಗೆ 2012ರಲ್ಲಿ ನಿಷೇಧ ಹೇರಿತ್ತು. ಆದರೆ ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ದುರ್ಗಾ ಪೂಜೆಯ ಸಂದರ್ಭದಲ್ಲಿ ಮಾತ್ರ ‘ಶುಭ ಸಂಕೇತ’ವಾಗಿ ನಿಗದಿತ ಪ್ರಮಾಣದಷ್ಟು ರಫ್ತಿಗೆ ಅವಕಾಶ ಕಲ್ಪಿಸಲಾಗಿತ್ತು’ ಎಂದು ಒಕ್ಕೂಟದ ಕಾರ್ಯದರ್ಶಿ ಸಯದ್ ಅನ್ವರ್ ಮಕ್ಸೂದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.