ಗುವಾಹಟಿ: ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಹಾರಿಸಿದ ಗುಂಡಿನಿಂದ ಬಾಂಗ್ಲಾದೇಶದ, ಮಾದಕವಸ್ತುಗಳ ಕಳ್ಳಸಾಗಣೆದಾರ ಮೃತಪಟ್ಟಿದ್ದಾನೆ. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಬಿಎಸ್‌ಎಫ್ ಮಂಗಳವಾರ ಈ ಕುರಿತಂತೆ ಹೇಳಿಕೆ ನೀಡಿದೆ.
ಮಾರಕಾಸ್ತ್ರಗಳನ್ನು ಹೊಂದಿದ್ದ ಬಾಂಗ್ಲಾದೇಶದ ದುಷ್ಕರ್ಮಿಗಳ ಗುಂಪು ಮಾದಕವಸ್ತುಗಳ ಸಾಗಣೆಗೆ ಮುಂದಾಗಿತ್ತು. ಸೆಪಾಹಿಜಲ ಜಿಲ್ಲೆಯ ಸಲ್ಪೋಖರ್ ಗಡಿಯ ಉಪಠಾಣೆ ಬಳಿ ಬಿಎಸ್‌ಎಫ್ ಸಿಬ್ಬಂದಿ ಮೇಲೆ ಹಲ್ಲೆಗೂ ಮುಂದಾಗಿತ್ತು. ಗುಂಪು ಚದುರಿಸಲು ಸಿಬ್ಬಂದಿ ಎರಡು ಸುತ್ತು ಗುಂಡು ಹಾರಿಸಿದ್ದರು.
ಆ ನಂತರವು ದುಷ್ಕರ್ಮಿಗಳ ಗುಂಪು ಉಪಠಾಣೆ ಸುತ್ತುವರೆದಿದ್ದು, ಬಿಎಸ್‌ಎಫ್ ಯೋಧರೊಬ್ಬರ ಮೇಲೆ ಹಲ್ಲೆ ಹಾಗೂ ರೈಫಲ್ ಕಸಿದುಕೊಳ್ಳಲು ಮುಂದಾಯಿತು. ಆಗ ಬಿಎಸ್‌ಎಫ್ ಸಿಬ್ಬಂದಿ ಹಾರಿಸಿದ ಗುಂಡು ತಗುಲಿ ಕಳ್ಳಸಾಗಣೆದಾರನೊಬ್ಬ ಮೃತಪಟ್ಟ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಗುಂಡಿನ ದಾಳಿ ಹಿಂದೆಯೇ ಗುಂಪು ಪಲಾಯನ ಮಾಡಿದೆ. ಮೃತನನ್ನು ಬಾಂಗ್ಲಾದೇಶದ ಕುಮಿಲ್ಲಾ ಜಿಲ್ಲೆಯ ಕಮಲ್ ಹುಸೇನ್ ಎಂದು ಗುರುತಿಸಲಾಗಿದೆ. ಬಾಂಗ್ಲಾದೇಶ ಗಡಿ ಭದ್ರತಾ ಪಡೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲೂ, ಹೀಗೆ ದುಷ್ಕರ್ಮಿಗಳು ಗಡಿದಾಟಿ ನುಸುಳುವಿಕೆ ವಿರುದ್ಧ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.