ಕೋಲ್ಕತ್ತ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಒಳನುಸುಳುಕೋರರನ್ನು ತಡೆಯಲು ಬಿಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದ ವೇಳೆ ಬಾಂಗ್ಲಾದೇಶದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೇಳಿದೆ.
ಒಳನುಸುಳುಕೋರರೊಂದಿಗಿನ ನಡೆದ ಘರ್ಷಣೆಯಲ್ಲಿ ಬಿಎಸ್‌ಎಫ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಪಡೆಯು ತಿಳಿಸಿದೆ.
ಬಾಂಗ್ಲಾದೇಶದಿಂದ ಮೂರ್ನಾಲ್ಕು ಮಂದಿ ಸೋಮವಾರ ಪಖುರಿಯಾ ಗಡಿ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು ಎಂದು ಸೇನೆ ಹೇಳಿದೆ.
‘ 8–10 ಮಂದಿ ಗಡಿಯಲ್ಲಿ ಹಾಕಲಾಗಿರುವ ಬೇಲಿಗಳಿಂದ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದರು. ಈ ವೇಳೆ ರಕ್ಷಣಾ ಸಿಬ್ಬಂದಿಯು ಅವರನ್ನು ಹಿಂದೆ ಸರಿಯುವಂತೆ ಕೋರಿದ್ದಾರೆ. ಆದರೆ ಅವರ ಮಾತು ಕೇಳದ ನುಸುಳುಕೋರರು ಚೂಪಾದ ಅಸ್ತ್ರ ಮತ್ತು ಕಲ್ಲುಗಳಿಂದ ದಾಳಿ ನಡೆಸಿದ್ದಾರೆ’ ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ.
‘ಈ ವೇಳೆ ಆತ್ಮ ರಕ್ಷಣೆಗಾಗಿ ಬಿಎಸ್‌ಎಫ್ ಯೋಧರು ಗುಂಡು ಹಾರಿಸಿದ್ದಾರೆ. ಮಹಿಳೆಯೊಬ್ಬರಿಗೆ ಗುಂಡು ತಗುಲಿದೆ. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಹಿಳೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದು ಬಿಎಸ್‌ಎಫ್ ತಿಳಿಸಿದೆ.
ಈ ಬಗ್ಗೆ ಬಿಎಸ್‌ಎಫ್ ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.