ADVERTISEMENT

ಬ್ಯಾಂಕ್‌ ಮುಷ್ಕರ: ₹18,600 ಕೋಟಿ ಮೌಲ್ಯದ ಚೆಕ್‌ ವಿಲೇವಾರಿಗೆ ಅಡ್ಡಿ

ಪಿಟಿಐ
Published 16 ಡಿಸೆಂಬರ್ 2021, 14:14 IST
Last Updated 16 ಡಿಸೆಂಬರ್ 2021, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ/ಬೆಂಗಳೂರು: ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಉದ್ಯೋಗಿಗಳು ಗುರುವಾರ ದೇಶದಾದ್ಯಂತ ಮುಷ್ಕರ ನಡೆಸಿದರು. ಇದರಿಂದಾಗಿರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳಲ್ಲಿ ಹಣ ವರ್ಗಾವಣೆ, ಸ್ವೀಕೃತಿ, ಸಾಲ ಮಂಜೂರಾತಿ ಸೇವೆಗಳಿಗೆ ಅಡ್ಡಿ ಆಯಿತು.

ಮುಷ್ಕರದಿಂದಾಗಿ ₹ 18,600 ಕೋಟಿ ಮೌಲ್ಯದ 20.4 ಲಕ್ಷ ಚೆಕ್‌ಗಳ ಕ್ಲಿಯರೆನ್ಸ್‌ ಆಗಿಲ್ಲ ಎಂದು ಅಖಿಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್‌. ವಂಕಟಾಚಲಂ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರದ ಧೋರಣೆಯಿಂದಾಗಿ 1 ಲಕ್ಷಕ್ಕಿಂತಲೂ ಅಧಿಕ ಬ್ಯಾಂಕ್‌ ಶಾಖೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಶಾಖೆಗಳ ಕಾರ್ಯಾಚರಣೆಗೆ ಅಡ್ಡಿಯಾಯಿತು’ ಎಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತಾ ಮಾಹಿತಿ ನೀಡಿದ್ದಾರೆ.

ADVERTISEMENT

ಒಂಭತ್ತು ಸಂಘಟನೆಗಳನ್ನು ಒಳಗೊಂಡಿರುವ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಶುಕ್ರವಾರವೂ ಮುಷ್ಕರ ನಡೆಯಲಿದ್ದು, ಬ್ಯಾಂಕಿಂಗ್‌ ಸೇವೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ವಿಮಾ ಕಂಪನಿಗಳ ಖಾಸಗೀಕರಣ, ಭಾರತೀಯ ಜೀವ ವಿಮಾ ನಿಗಮದಲ್ಲಿನ ಬಂಡವಾಳ ಹಿಂತೆಗೆತ, ವಿಮಾ ಕ್ಷೇತ್ರದಲ್ಲಿ ಶೇಕಡ 74ರವರೆಗೆ ಎಫ್‌ಡಿಐಗೆ ಅವಕಾಶದಂತಹ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಯುಎಫ್‌ಬಿಯು ವಿರೋಧ ವ್ಯಕ್ತಪಡಿಸಿದೆ.

ರಾಜ್ಯದಲ್ಲಿಯೂ ಬ್ಯಾಂಕ್‌ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸೇವೆಗಳು ಲಭ್ಯವಾಗಲಿಲ್ಲ ಎಂದು ನೌಕರರ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೆ.ಜಿ.ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಕಚೇರಿ ಬಳಿ ಸೇರಿದ್ದ 1,500ಕ್ಕೂ ಅಧಿಕ ಸಿಬ್ಬಂದಿ ಮತ್ತು ಅಧಿಕಾರಿಗಳು ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ಧ ಪ್ರತಿಭಟನೆ ನಡೆಸಿದರು ಎಂದು ಭಾರತೀಯ ರಾಷ್ಟ್ರೀಯ ಬ್ಯಾಂಕ್‌ ಉದ್ಯೋಗಿಗಳ ಒಕ್ಕೂಟದ (ಐಎನ್‌ಬಿಇಎಫ್‌) ರಾಜ್ಯದ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಎಂ.ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.