ನವದೆಹಲಿ: 'ಈ ಹಿಂದೆ ಬ್ಯಾಂಕಿಂಗ್ ವಲಯದಲ್ಲಿ ಪಾರದರ್ಶಕತೆಯ ಕೊರತೆಯಿಂದಾಗಿ ಹಲವು ಅಭ್ಯಾಸಗಳು ರೂಢಿಯಾಗಿದ್ದವು. ಅದರಿಂದಾಗಿ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಏರುತ್ತಲೇ ಇತ್ತು' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಮೊದಲ ಲೆಕ್ಕಪರಿಶೋಧನೆ ದಿನದ (ಆಡಿಟ್ ದಿವಸ್) ಅಂಗವಾಗಿ ದೆಹಲಿಯ ಮಹಾಲೇಖಪಾಲರ (ಸಿಎಜಿ) ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ವಸೂಲಾಗದ ಸಾಲಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಡಗಿಸಲು ಏನೆಲ್ಲ ಕೆಲಸಗಳನ್ನು ಮಾಡಲಾಗಿದೆ ಎಂಬುದು ನಿಮಗೆ ಚೆನ್ನಾಗಿಯೇ ತಿಳಿದಿದೆ' ಎಂದರು.
'ಕಾಲ ಸರಿದಂತೆ ಕೆಲವು ಸಂಸ್ಥೆಗಳು ಮಾತ್ರವೇ ಬಲಿಷ್ಠಗೊಳ್ಳುತ್ತ, ಪ್ರಬುದ್ಧಗೊಳ್ಳುತ್ತ ಸಾಗುತ್ತವೆ. ಕೆಲವು ದಶಕಗಳ ಬಳಿಕ ಹೆಚ್ಚಿನ ಸಂಸ್ಥೆಗಳು ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಆದರೆ, ಸಿಎಜಿ ಒಂದು ಪರಂಪರೆಯಾಗಿದ್ದು, ಪ್ರತಿ ತಲೆಮಾರು ಅದನ್ನು ಕಾಪಿಟ್ಟುಕೊಳ್ಳಬೇಕಿದೆ. ಅದೊಂದು ದೊಡ್ಡ ಹೊಣೆಗಾರಿಕೆಯಾಗಿದೆ' ಎಂದು ಸಿಎಜಿ ಮಹತ್ವದ ಕುರಿತು ಪ್ರಧಾನಿ ಬಣ್ಣಿಸಿದರು.
'ಸರ್ಕಾರದ ಕೆಲಸಗಳ ಮೌಲ್ಯಮಾಪನ ನಡೆಸುವಾಗ ಸಿಎಜಿ ಹೊರಗೆ ನಿಂತು ಕಾಣುವ ದೃಷ್ಟಿಕೋನವನ್ನು ಹೊಂದಿದೆ. ಸಿಎಜಿ ನೀಡುವ ಸಲಹೆಗಳಿಂದ ನಾವು ವ್ಯವಸ್ಥಿತ ಬೆಳವಣಿಗೆ ತರಲು ಸಾಧ್ಯವಾಗುತ್ತಿದೆ. ಅದನ್ನು ನಾವು ಸಹಕಾರವೆಂದು ಪರಿಗಣಿಸುತ್ತೇವೆ. ಲೆಕ್ಕಪರಿಶೋಧನೆಯನ್ನು ಸಂಶಯ ಮತ್ತು ಭಯದಿಂದ ಕಾಣುವ ಕಾಲವಿತ್ತು. ಸಿಎಜಿ ವರ್ಸಸ್ ಸರ್ಕಾರ ಎಂಬಂತೆ ನಮ್ಮ ವ್ಯವಸ್ಥೆಯಲ್ಲಿ ಕಾಣಲಾಗುತ್ತಿತ್ತು. ಈಗ ಲೆಕ್ಕಪರಿಶೋಧನೆಯು ಮೌಲ್ಯಯುತ ಅಂಶಗಳ ಪ್ರಮುಖ ಭಾಗವಾಗಿ ಕಾಣಲಾಗುತ್ತಿದೆ' ಎಂದರು.
'ಹಿಂದಿನ ಸರ್ಕಾರಗಳ ವಾಸ್ತವಾಂಶಗಳು, ವಾಸ್ತವ ಸ್ಥಿತಿಯನ್ನು ಪ್ರಮಾಣಿಕವಾಗಿ ನಾವು ರಾಷ್ಟ್ರದ ಮುಂದೆ ತೆರೆದಿಟ್ಟೆವು. ಸಮಸ್ಯೆಯನ್ನು ಗುರುತಿಸಿದಾಗಲೇ ನಮಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಬಳಸದ ಮತ್ತು ಕಡಿಮೆ ಬಳಕೆಗೆ ಒಡ್ಡಿಕೊಂಡಿರುವ ಮೂಲಗಳನ್ನು ಮೌಲ್ಯೀಕರಣಗೊಳಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡೆವು. ಅಂಥ ನಿರ್ಧಾರಗಳಿಂದಾಗಿ ಆರ್ಥಿಕತೆಯ ಪುನಶ್ಚೇತನಗೊಳಿಸುವುದು ಸಾಧ್ಯವಾಗಿದೆ' ಎಂದು ಪ್ರಧಾನಿ ಹೇಳಿದರು.
ವೈಜ್ಞಾನಿಕ ಮತ್ತು ಕಠಿಣವಾಗಿ ನಡೆಸುವ ಲೆಕ್ಕಪರಿಶೋಧನೆಯಿಂದ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ ಹಾಗೂ ಪಾರದರ್ಶಕವಾಗಿಸುತ್ತದೆ. 'ದತ್ತಾಂಶವು ಮಾಹಿತಿಯಾಗಿದೆ ಹಾಗೂ ಭವಿಷ್ಯದಲ್ಲಿ ದತ್ತಾಂಶವೇ ಇತಿಹಾಸವನ್ನು ನಿರೂಪಿಸಲಿದೆ' ಎಂದರು.
'ಕಥೆಗಳ ಮೂಲಕ ಇತಿಹಾಸವನ್ನು ಉಲ್ಲೇಖಿಸಲಾಗುತ್ತಿತ್ತು. ಆದರೆ, 21ನೇ ಶತಮಾನದಲ್ಲಿ ದತ್ತಾಂಶವೇ ಮಾಹಿತಿಯಾಗಿದೆ ಹಾಗೂ ಮುಂಬರುವ ದಿನಗಳಲ್ಲಿ ನಮ್ಮ ಇತಿಹಾಸವನ್ನು ದತ್ತಾಂಶದ ಮೂಲಕವೇ ಕಾಣಲಾಗುತ್ತದೆ ಮತ್ತು ತಿಳಿಯಲಾಗುತ್ತದೆ' ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.