ADVERTISEMENT

‘ಬಟೇಂಗೆ’ ಹೇಳಿಕೆಯ ಅರ್ಥ ಗ್ರಹಿಸಲು ವಿಫಲ: ಫಡಣವೀಸ್

ಪಿಟಿಐ
Published 14 ನವೆಂಬರ್ 2024, 15:18 IST
Last Updated 14 ನವೆಂಬರ್ 2024, 15:18 IST
ದೇವೇಂದ್ರ ಫಡಣವೀಸ್
ದೇವೇಂದ್ರ ಫಡಣವೀಸ್   

ಮುಂಬೈ: ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟದ ಕೆಲವು ನಾಯಕರು ‘ಬಟೇಂಗೆ ತೊ ಕಟೇಂಗೆ’ (ಒಗ್ಗಟ್ಟಿಲ್ಲದಿರುವುದು ವಿನಾಶಕ್ಕೆ ಕಾರಣವಾಗುತ್ತದೆ) ಹೇಳಿಕೆಯ ಅರ್ಥ ಗ್ರಹಿಸಲು ವಿಫಲರಾಗಿದ್ದಾರೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವಂದ್ರ ಫಡಣವೀಸ್‌ ಹೇಳಿದ್ದಾರೆ.

ವಿರೋಧ ಪಕ್ಷಗಳ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದ ಪ್ರಚಾರ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿಯು ಈ ನಿರೂಪಣೆಯನ್ನು ಮುನ್ನೆಲೆಗೆ ತಂದಿದೆ. ಆದರೆ ತಮ್ಮದೇ ಪಕ್ಷದ ಅಶೋಕ್‌ ಚವಾಣ್‌ ಮತ್ತು ಪಂಕಜಾ ಮುಂಡೆ ಅವರು ಈ ಹೇಳಿಕೆಯ ‘ತಿರುಳು’ ಅರ್ಥಮಾಡಿಕೊಂಡಿಲ್ಲ ಎಂದು ಗುರುವಾರ ಸುದ್ದಿಗಾರರೊಂದಿಗಿನ ಸಂವಾದದ ವೇಳೆ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನೀಡಿದ್ದ ‘ಬಟೇಂಗೆ ತೊ ಕಟೇಂಗೆ’ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿಯು, ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ADVERTISEMENT

‘ಕಾಂಗ್ರೆಸ್ ನೇತೃತ್ವದ ಎಂವಿಎಯ ವಿಭಜಕ ರಾಜಕಾರಣಕ್ಕೆ ಪ್ರತಿಯಾಗಿ ನಾವು ಈ ಹೇಳಿಕೆಯನ್ನು ಬಳಸಿಕೊಂಡಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂಬುದೇ ಈ ಹೇಳಿಕೆಯ ಅರ್ಥ’ ಎಂದು ಹೇಳಿದರು. 

ಬಿಜೆಪಿಯವರೇ ಆದ ಅಶೋಕ್‌ ಚವಾಣ್‌ ಮತ್ತು ಪಂಕಜಾ ಮುಂಡೆ ಅಲ್ಲದೆ, ‘ಮಹಾಯುತಿ’ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್ ಅವರೂ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

‘ನಾವು ಮುಸ್ಲಿಮರ ವಿರುದ್ಧ ಇದ್ದೇವೆ ಎಂಬುದು ಇದರ ಅರ್ಥವಲ್ಲ. ಸರ್ಕಾರವು ಎಲ್ಲ ಸಮುದಾಯಗಳಿಗೂ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ‘ಲಡ್ಕಿ ಬಹೀಣ್‌ ಯೋಜನೆ’ ಮುಸ್ಲಿಂ ಮಹಿಳೆಯರಿಗೆ ಅನ್ವಯಿಸುವುದಿಲ್ಲ ಎಂದು ನಾವು ಹೇಳಿದ್ದೇವೆಯೇ’ ಎಂದು ಫಡಣವೀಸ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.