ADVERTISEMENT

ಉತ್ತರ ಪ್ರದೇಶದಲ್ಲಿ ಬಾವಲಿಗಳ ದಿಢೀರ್‌ ಸಾವು 

ಏಜೆನ್ಸೀಸ್
Published 30 ಮೇ 2020, 2:57 IST
Last Updated 30 ಮೇ 2020, 2:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬರೇಲಿ: ಉತ್ತರ ಪ್ರದೇಶದ ಬೆಲ್‌ಘಾಟ್‌ನಲ್ಲಿ ಬಾವಲಿಗಳು ಸಾಮೂಹಿಕವಾಗಿ ಸಾವಿಗೀಡಾದ ಘಟನೆ ನಡೆದ ಬೆನ್ನಲ್ಲೇಬರೇಲಿಯಲ್ಲೂ ಬಾವಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಿಢೀರ್‌ ಸಾವಿಗೀಡಾಗಿವೆ.

ಮಿದುಳಿನ ರಕ್ತಸ್ರಾವದಿಂದ ಬಾವಲಿಗಳು ಮೃತಪಟ್ಟಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ ಹೆಚ್ಚಿನ ಸಂಖ್ಯೆಯಲ್ಲಿ ಬಾವಲಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಅವುಗಳ ಮರಣೋತ್ತರ ಪರೀಕ್ಷೆಗಳನ್ನು ನಡೆಸಲಾಯಿತು. ತೀವ್ರ ತಾಪಮಾನದಿಂದಾಗಿ ಅವುಗಳ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ,ಮೃತಪಟ್ಟಿವೆ. ಬಾವಲಿಗಳು ತಮ್ಮ ಹಿಂದಿನ ಆವಾಸಸ್ಥಾನಕ್ಕೆ ಹಾನಿಯಾದ ಕಾರಣ ಇತ್ತೀಚೆಗೆ ತಮ್ಮ ವಾಸಸ್ಥಾನವನ್ನು ಬದಲಾಯಿಸಿಕೊಂಡಿದ್ದವು,’ ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಆರ್.ಕೆ.ಸಿಂಗ್ ತಿಳಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಆವರಿಸಿರುವ ಬಿಸಿಗಾಳಿಯು ಮೇ 29 ರಿಂದ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಈ ಮೊದಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿತ್ತು.

ಗೋರಖ್‌ಪುರದ ಬೆಲ್‌ಘಾಟ್‌ ಎಂಬಲ್ಲಿಯೂ ಇದೇ ರೀತಿ 52 ಬಾವಲಿಗಳು ಕೇವಲ ಒಂದೇ ಗಂಟೆಯ ಅವಧಿಯಲ್ಲಿ ಸತ್ತಿದ್ದವು. ಇದರಿಂದ ಉತ್ತರ ಪ್ರದೇಶದಲ್ಲಿ ಆತಂಕ ಮನೆ ಮಾಡಿತ್ತು. ಸ್ಥಳಕ್ಕೆ ಬಂದಿದ್ದ ಅರಣ್ಯ ಅಧಿಕಾರಿಗಳು, ಬಾವಲಿಗಳ ಕಳೇಬರವನ್ನು ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ರವಾನಿಸಿದ್ದರು. ಈ ವೇಳೆ ಮಾತನಾಡಿದ್ದ ಅಧಿಕಾರಿಗಳು, ‘ಬಿಸಿಗಾಳಿ ಅಥವಾ ಕೀಟನಾಶಗಳಿಂದ ಬಾವಲಿಗಳು ಸತ್ತಿರಬಹುದು,’ ಎಂದು ಹೇಳಿದ್ದರು.

ಹೀಗಿರುವಾಗಲೇ ಬರೇಲಿಯಲ್ಲಿಯೂ ಅಂಥದ್ದೇ ಘಟನೆ ನಡೆದಿದ್ದು, ಅವುಗಳ ಸಾವು ಅತಿಯಾದ ತಾಪಮಾನದಿಂದ ಸಂಭವಿಸಿದ್ದು ಎಂದು ಪಶುವೈದ್ಯಕೀಯ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.