ADVERTISEMENT

ಗೋಧ್ರೋತ್ತರ ಹತ್ಯಾಕಾಂಡಕ್ಕೆ ಮೋದಿ ಹೊಣೆ: ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತ ಖಂಡನೆ

‘ಅಪಪ್ರಚಾರವೇ ಸಾಕ್ಷ್ಯಚಿತ್ರದ ಉದ್ದೇಶ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 23:06 IST
Last Updated 19 ಜನವರಿ 2023, 23:06 IST
ಬಿಬಿಸಿ ಐಪ್ಲೇನಲ್ಲಿರುವ ಸಾಕ್ಷ್ಯಚಿತ್ರದ ಪೋಸ್ಟರ್‌
ಬಿಬಿಸಿ ಐಪ್ಲೇನಲ್ಲಿರುವ ಸಾಕ್ಷ್ಯಚಿತ್ರದ ಪೋಸ್ಟರ್‌   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರವು ಅಪಪ್ರಚಾರದ ಉದ್ದೇಶ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಆರೋಪಿಸಿದ್ದಾರೆ.

ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರವನ್ನು ಬಿಬಿಸಿ ನಿರ್ಮಿಸಿದೆ. ಸಾಕ್ಷ್ಯಚಿತ್ರದ ಒಂದು ಕಂತು ಜನವರಿ 17ರಂದು ಬಿಡುಗಡೆಯಾಗಿದೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರೋತ್ತರ ಹತ್ಯಾಕಾಂಡವನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲವಾಗಿದ್ದರು. ಪೊಲೀಸರ ವೈಫಲ್ಯದಲ್ಲಿ ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿದ್ದ ಮೋದಿ ಅವರ ಪಾತ್ರವೂ ಇತ್ತು ಎಂದು ಭಾರತದಲ್ಲಿ ಬ್ರಿಟನ್ ರಾಜತಾಂತ್ರಿಕರಾಗಿದ್ದ ಅಧಿಕಾರಿಗಳು ಹೇಳಿರುವುದನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ.

‘ಅಪಪ್ರಚಾರ ಮತ್ತು ಅಪಖ್ಯಾತಿ ಉದ್ದೇಶದ ನಿರೂಪಣೆ ಈ ಸಾಕ್ಷ್ಯಚಿತ್ರದಲ್ಲಿ ಇರುವುದು ಢಾಳಾಗಿ ಕಾಣುತ್ತಿದೆ. ಸಾಕ್ಷ್ಯಚಿತ್ರವನ್ನು ವಸಾಹತುಶಾಹಿ ಮನಸ್ಥಿತಿಯಲ್ಲೇ ನಿರ್ಮಿಸಲಾಗಿದೆ. ಇಂತಹ ಅಪಪ್ರಚಾರದ ಹಿಂದೆ ಇರುವ ಸಂಸ್ಥೆ ಮತ್ತು ವ್ಯಕ್ತಿಯ ಮನಸ್ಥಿತಿಯನ್ನೇ ಈ ಸಾಕ್ಷ್ಯಚಿತ್ರ ಬಿಂಬಿಸುತ್ತಿದೆ. ಇಂತಹ ಪ್ರಯತ್ನದ ಅಗತ್ಯವಿತ್ತೇ? ಇಂತಹ ಪ್ರಯತ್ನಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿಲ್ಲ’ ಎಂದು ಬಾಗ್ಚಿ ಹೇಳಿದ್ದಾರೆ.

ADVERTISEMENT

‘ಭಾರತದಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದ ಜಾಕ್‌ ಸ್ಟ್ರಾ ಅವರು ಯಾವುದೋ ವರದಿಯ ಬಗ್ಗೆ ಮಾತನಾಡಿದ್ದಾರೆ. ಅದು ಬಹುಶಃ ಬ್ರಿಟನ್‌ನ ಆಂತರಿಕ ವರದಿ ಇರಬಹುದು. ಅದು 20 ವರ್ಷಗಳಷ್ಟು ಹಳೆಯ ವರದಿ. ಅದು ನಮಗೆ ಹೇಗೆ ಸಿಗುತ್ತದೆ? ಆ ಬಗ್ಗೆ ನಾವು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಒಬ್ಬ ಅಧಿಕಾರಿ ಹಾಗೆ ಹೇಳಿದ ಎಂದ ಮಾತ್ರಕ್ಕೇ ಅದಕ್ಕೆ ಅಷ್ಟು ತೂಕ ಬರುತ್ತದೆಯೇ’ ಎಂದು ಬಾಗ್ಚಿ ಪ್ರಶ್ನಿಸಿದ್ದಾರೆ.

‘ತಾವು ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದೆವು ಎಂದು ಅವರು ಹೇಳಿದ್ದಾರೆ. ತನಿಖೆ ಎಂಬ ಪದ ಬಳಸಿರುವ ಕಾರಣಕ್ಕೇ ಅವರಿನ್ನೂ ವಸಾಹತುಶಾಹಿ ಮನಸ್ಥಿತಿಯಲ್ಲಿ ಇದ್ದಾರೆ ಎಂದು ನಾನು ಹೇಳಿದ್ದು. ಅವರು ಇಲ್ಲಿ ರಾಜತಾಂತ್ರಿಕ ಅಧಿಕಾರಿಯಾಗಿದ್ದರು. ಹಾಗಿದ್ದಾಗ ತನಿಖೆ ನಡೆಸಲು ಸಾಧ್ಯವೇ? ಅವರೇನು ಭಾರತವನ್ನು ಆಳುತ್ತಿದ್ದರೇ. ಅವರ ಪ್ರತಿಪಾದನೆಯನ್ನು ನಾವು ಒಪ್ಪುವುದಿಲ್ಲ’ ಎಂದು ಬಾಗ್ಚಿ ಹೇಳಿದ್ದಾರೆ.

ಸುನಕ್ ಪ್ರತಿಕ್ರಿಯೆ
‘ಸಾಕ್ಷ್ಯಚಿತ್ರದಲ್ಲಿ ಆ ವ್ಯಕ್ತಿಯ ಚಿತ್ರಣವನ್ನು ನಾನು ಒಪ್ಪುತ್ತೇನೆಯೇ ಎಂಬುದು ಖಚಿತವಿಲ್ಲ’ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

ಬಿಬಿಸಿಯ ಸಾಕ್ಷ್ಯಚಿತ್ರದ ಬಗ್ಗೆ ಬ್ರಿಟನ್‌ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ಇಮ್ರಾನ್ ಹುಸೇನ್‌ ಅವರು ಪ್ರಸ್ತಾಪಿಸಿದರು. ‘ಸಾಕ್ಷ್ಯಚಿತ್ರದಲ್ಲಿರುವ ಪ್ರತಿಪಾದನೆಯನ್ನು ನೀವು ಒಪ್ಪುತ್ತೀರಾ’ ಎಂದು ಪ್ರಶ್ನಿಸಿದರು. ಇಮ್ರಾನ್‌ ಪಾಕಿಸ್ತಾನ ಮೂಲದವರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುನಕ್, ‘ಈ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಧರ್ಮಾಧಾರಿತ ಕಿರುಕುಳವು ಜಗತ್ತಿನ ಎಲ್ಲಿಯೇ ನಡೆದರೂ ನಾವು ಸಹಿಸಿಕೊಳ್ಳುವುದಿಲ್ಲ ಎಂಬುದೂ ನಿಜ’ ಎಂದು ಹೇಳಿದ್ದಾರೆ.

ಬಿಬಿಸಿ ಸಮರ್ಥನೆ
ಸಾಕ್ಷ್ಯಚಿತ್ರವನ್ನು ಬಿಬಿಸಿ ಸಮರ್ಥಿಸಿಕೊಂಡಿದೆ. ‘ಪತ್ರಿಕೋದ್ಯಮದ ಉತ್ಕೃಷ್ಟ ಮಟ್ಟದ ಮಾನದಂಡಗಳನ್ನು ಅನುಸರಿಸಿ ವಿಸ್ತೃತ ಅಧ್ಯಯನದ ಮೂಲಕ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ. ಹಲವರನ್ನು ಸಂರ್ಪಕಿಸಿ ಅಭಿಪ್ರಾಯ ಪಡೆದು ಕೊಳ್ಳಲಾಗಿದೆ. ಮೋದಿ ನೇತೃತ್ವದ ಬಿಜೆಪಿ ಮುಖಂಡರ ಅಭಿಪ್ರಾಯಗಳೂ ಸೇರಿ, ಹಲವರ ಅಭಿಪ್ರಾಯಗಳನ್ನು ಸಾಕ್ಷ್ಯಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಸಾಕ್ಷ್ಯಚಿತ್ರದಲ್ಲಿ ಎತ್ತಲಾಗಿರುವ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಭಾರತ ಸರ್ಕಾರವನ್ನು ಕೋರಲಾಗಿತ್ತು. ಆದರೆ, ಪ್ರತಿಕ್ರಿಯೆ ನೀಡಲು ಭಾರತ ಸರ್ಕಾರವು ನಿರಾಕರಿಸಿತು’ ಎಂದು ಬಿಬಿಸಿ ಹೇಳಿಕೆ ನೀಡಿದೆ. ಸಾಕ್ಷ್ಯಚಿತ್ರವು ಬ್ರಿಟನ್‌ನಲ್ಲಿ ಮಾತ್ರ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.