ADVERTISEMENT

ಬಿಬಿಸಿ ವಿಶ್ವದ ಅತ್ಯಂತ ‘ಭ್ರಷ್ಟ ಬಕ್ವಾಸ್ ಕಾರ್ಪೊರೇಷನ್’: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2023, 10:54 IST
Last Updated 14 ಫೆಬ್ರುವರಿ 2023, 10:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವೆದಹಲಿ: ‘ಬಿಬಿಸಿ ವಿಶ್ವದಲ್ಲೇ ಅತ್ಯಂತ ‘ಭ್ರಷ್ಟ ಬಕ್ವಾಸ್ (ಮೂರ್ಖ) ಕಾರ್ಪೊರೇಷನ್’ ಆಗಿ ಮಾರ್ಪಟ್ಟಿದೆ. ದುರದೃಷ್ಟವಶಾತ್, ಬಿಬಿಸಿಯ ಪ್ರಚಾರ ಮತ್ತು ಕಾಂಗ್ರೆಸ್ ಕಾರ್ಯಸೂಚಿಗಳು ಒಂದೇ ಆಗಿವೆ’ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ಬಿಬಿಸಿ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿದ್ದು, ತಪಾಸಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಗೌರವ್ ಭಾಟಿಯಾ, ಕಾಂಗ್ರೆಸ್ ಹಾಗೂ ಬಿಬಿಸಿ ವಿರುದ್ಧ ಕಿಡಿಕಾರಿದ್ದಾರೆ.

ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಮಾಧ್ಯಮ ಸಂಸ್ಥೆಯು ದೇಶದ ನಿಯಮಗಳು ಮತ್ತು ನಿಬಂಧನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಕಾನೂನುಬದ್ಧವಾಗಿ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿದೆ ಎಂದಿದ್ದಾರೆ.

ADVERTISEMENT

ಕಾಂಗ್ರೆಸ್ ಆಡಳಿತದಲ್ಲಿ ಸರ್ಕಾರಿ ಸಂಸ್ಥೆಗಳ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದಂತೆ ಐಟಿ ಇಲಾಖೆ ಈಗ ‘ಪಂಜರದ ಗಿಳಿಯಾಗಿಲ್ಲ’ ಎಂದು ಗೌರವ್ ಭಾಟಿಯಾ ಕಿಡಿಕಾರಿದ್ದಾರೆ.

ಬ್ರಿಟನ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರು ಬಿಬಿಸಿ ಬಗ್ಗೆ ಏನು ಹೇಳಿದ್ದಾರೆಂದು ಒಮ್ಮೆ ನೆನಪಿಸಿಕೊಳ್ಳಬೇಕು. ಥ್ಯಾಚರ್, ಬಿಬಿಸಿಯನ್ನು ‘ಬೋಲ್ಶೆವಿಕ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್’ ಎಂದು ಹೇಳಿದ್ದರು. ಅಲ್ಲದೆ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಬಿಬಿಸಿ ಮೇಲೆ ನಿಷೇಧ ಹೇರಿದ್ದರು ಎಂಬುದನ್ನು ಕಾಂಗ್ರೆಸ್ ನೆನಪಿಸಿಕೊಳ್ಳಬೇಕು.ಭಾರತ ಪ್ರತಿ ಸಂಸ್ಥೆಗೆ ತನ್ನ ಕಾನೂನುಗಳ ಅಡಿಯಲ್ಲಿ ಕೆಲಸ ಮಾಡಲು ಅವಕಾಶಗಳನ್ನು ಒದಗಿಸುವ ದೇಶವಾಗಿದೆ. ಬಿಬಿಸಿ ಗುಪ್ತ ಕಾರ್ಯಸೂಚಿಯನ್ನು ಹೊಂದಿಲ್ಲದಿದ್ದರೆ ದೇಶದ ವಿರುದ್ಧ ವಿಷವನ್ನು ಉಗುಳುವುದಿಲ್ಲ ಎಂದು ಭಾಟಿಯಾ ಗರಂ ಆಗಿದ್ದಾರೆ.

ವಿಶ್ವ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಭಾರತವು ಉತ್ತಮ ಸಾಧನೆಗಳನ್ನು ಮಾಡುತ್ತಿದೆ. ಆದರೆ, ಕೆಲವು ವರ್ಗದವರಿಗೆ ಭಾರತದ ಬೆಳವಣಿಗೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಹಾಗೂ ಬಿಬಿಸಿ ವಿರುದ್ಧ ಭಾಟಿಯಾ ಗುಡುಗಿದ್ದಾರೆ.

ಭಾರತದಲ್ಲಿ ಪತ್ರಿಕೋದ್ಯಮ ಮಾಡಲು ಬಿಬಿಸಿಗೆ ಎಲ್ಲಾ ಹಕ್ಕುಗಳಿವೆ. ಆದರೆ, ಅವರು ದೇಶದ ಕಾನೂನಿಗೆ ಬದ್ಧರಾಗಿರಬೇಕು’ ಎಂದು ಭಾಟಿಯಾ ಹೇಳಿದ್ದಾರೆ.

2002ರ ಗುಜರಾತ್‌ ಕೋಮು ಗಲಭೆ ಕುರಿತು ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (ಬಿಬಿಸಿ) ವ್ಯಾಪಕ ಚರ್ಚೆಗೆ ಗುರಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.