ನವದೆಹಲಿ:ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಲು ಉತ್ಸುಕರಾಗಿರುವ ಮಹಿಳೆಯರು ವಿಸ್ತೃತ ಪೀಠದ ತೀರ್ಪು ಬರುವವರೆಗೆ ಕಾಯಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
‘ಎಲ್ಲ ವಯಸ್ಸಿನ ಮಹಿಳೆಯರು ದರ್ಶನ ಪಡೆಯಲು ಇಚ್ಛಿಸಿದರೆ ದೇಗುಲಕ್ಕೆ ಹೋಗಬಹುದು. ಆದರೆ ಪರಿಸ್ಥಿತಿ ಗಂಭೀರವಾಗಿದ್ದು, ಅದು ವಿಕೋಪಕ್ಕೆ ತಿರುಗುವುದುಬೇಡ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಶಬರಿಮಲೆ ದೇಗುಲ ಪ್ರವೇಶಿಸುವ ಮಹಿಳೆಯರಿಗೆ ಪೊಲೀಸ್ ರಕ್ಷಣೆ ಒದಗಿಸುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಲಿಲ್ಲ.
ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ‘ಶಬರಿಮಲೆ ವಿಷಯ ಸಾಕಷ್ಟು ಭಾವನಾತ್ಮಕವಾಗಿದ್ದು, ಸದ್ಯದ ಸ್ಥಿತಿಯಲ್ಲಿ ಅಂತಹ ಆದೇಶ ನೀಡಲು ಬಯಸುವುದಿಲ್ಲ’ ಎಂದಿತು.
‘ಪ್ರಕರಣ ಈಗಾಗಲೇ ಏಳು ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆಯಾಗಿರುವುದರಿಂದ ಸದ್ಯಕ್ಕೆ ಯಾವುದೇ ಆದೇಶ ನೀಡುವುದಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠ ಸ್ಪಷ್ಟಪಡಿಸಿತು. ದೇವಸ್ಥಾನದಲ್ಲಿ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರಾರ್ಥನೆಗೆ ಅವಕಾಶ ನೀಡಿದರೆ ಸಮಸ್ಯೆಯೇ ಇರುವುದಿಲ್ಲ ಎಂದು ತಿಳಿಸಿತು.
ಅರ್ಜಿದಾರರ ಪರ ಹಾಜರಿದ್ದ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರು, ‘ಮಹಿಳೆಯರ ಪ್ರವೇಶಕ್ಕೆ ಕೇರಳ ಸರ್ಕಾರ ಅವಕಾಶ ನೀಡುತ್ತಿಲ್ಲ. ತೀರ್ಪಿಗೆ ತಡೆ ಇಲ್ಲದಿದ್ದರೂ ಆದೇಶ ಪಾಲನೆಯಾಗುತ್ತಿಲ್ಲ. ಇದರಿಂದ ತಪ್ಪು ಸಂದೇಶ ರವಾನಿಸುತ್ತದೆ’ ಎಂದು ಹೇಳಿದರು.
‘ಕಾನೂನು ಅರ್ಜಿದಾರರ ಪರವಾಗಿದೆ. ಒಂದು ವೇಳೆ ಅದು ಪಾಲನೆಯಾಗದಿದ್ದಲ್ಲಿ, ನಿಯಮ ಉಲ್ಲಂಘಿಸಿದವರನ್ನು ಜೈಲಿಗೆ ಕಳುಹಿಸಲಾಗುವುದು’ ಎಂದು ನ್ಯಾಯಮೂರ್ತಿಗಳು ಹೇಳಿದರು.
ಸಾಮಾಜಿಕ ಕಾರ್ಯಕರ್ತರಾದ ರೆಹಾನಾ ಫಾತಿಮಾ ಹಾಗೂ ಬಿಂದು ಅಮ್ಮಿಣಿ ಅವರ ಪರವಾಗಿ ಹಿರಿಯ ವಕೀಲರಾದ ಕಾಲಿನ್ ಗೊನ್‌ಸಾಲ್ವೆಸ್ ಹಾಗೂ ಇಂದಿರಾ ಜೈಸಿಂಗ್ ಹಾಜರಿದ್ದರು.
‘ಕಾನೂನು ನಿಮ್ಮ ಪರವಾಗಿದೆ ನಿಜ. ಆದರೆ ಇದರಿಂದ ಯಾರದೋ ಒಬ್ಬರ ಜೀವ ಹೋಗುವುದು ಬೇಡ. ನಿಗದಿತ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶ ನಿಷೇಧಿಸುವ ಆಚರಣೆ ಸಾವಿರಾರು ವರ್ಷಗಳಿಂದ ಅಲ್ಲಿ ಚಾಲ್ತಿಯಲ್ಲಿದೆ. ಎಲ್ಲವನ್ನೂ ಪರಾಮರ್ಶಿಸಿ ನೋಡಿದಾಗ, ಸದ್ಯಕ್ಕೆ ನಿಮ್ಮ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ವಿಸ್ತೃತ ಪೀಠವು ಈ ಬಗ್ಗೆ ನಿರ್ಧಾರ ತಳೆಯಲಿದೆ’ ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಲು ನವೆಂಬರ್ 14ರಂದು ಕೋರ್ಟ್ ನಿರ್ಧರಿಸಿತ್ತು.
ಕೋರ್ಟ್ ಹೇಳಿದ್ದೇನು..?
ಶಬರಿಮಲೆ ಪ್ರಕರಣದ ಬಗ್ಗೆ ಜನರು ಸಾಕಷ್ಟು ಭಾವನಾತ್ಮಕವಾಗಿದ್ದಾರೆ
ತೀರ್ಪಿಗೆ ತಡೆ ನೀಡಿಲ್ಲ ಎಂಬುದು ಎಷ್ಟು ಸತ್ಯವೋ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಿರುವುದೂ ಅಷ್ಟೇ ನಿಜ
ವಿಚಾರಣೆಗೆ ಸದ್ಯದಲ್ಲೇ ಏಳು ನ್ಯಾಯಾಧೀಶರ ಪೀಠವನ್ನು ರಚಿಸಲಾಗುವುದು
ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ 2018ರ ಸೆ.28ರ ತೀರ್ಪಿಗೆ ತಡೆ ನೀಡಿಲ್ಲ;ಇದು ಅಂತಿಮ ನಿರ್ಧಾರವೂ ಅಲ್ಲ
***
ಮಹಿಳೆಯರು ಪೊಲೀಸ್ ರಕ್ಷಣೆ ಕೋರಿದರೆ, ಅದನ್ನು ಪರಿಶೀಲಿಸಿ ಅಗತ್ಯವಿದ್ದರೆ ರಕ್ಷಣೆ ನೀಡಲಾಗುವುದು.
–ಸುಪ್ರೀಂ ಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.