ಚೆನ್ನೈ: ದನದ ಮಾಂಸದ ಸೂಪ್ ಕುಡಿಯುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ ಮೊಹಮ್ಮದ್ ಫೈಜಾನ್ (24) ಎಂಬ ಯುವಕನ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ನಾಗಪಟ್ಟಣಂ ಜಿಲ್ಲೆಯ ಪೊರವಚೇರಿ ಎಂಬ ಗ್ರಾಮದ ಫೈಜಾನ್ ಇದೇ 9ರಂದು ಈ ಚಿತ್ರವನ್ನು ಪ್ರಕಟಿಸಿದ್ದರು.
ಈ ಚಿತ್ರ ನೋಡಿ ಆಕ್ರೋಶಗೊಂಡ ನಾಲ್ವರ ಗುಂಪು ಫೈಜಾನ್‌ನ ಮನೆಗೆ ನುಗ್ಗಿ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡ ಅವರಿಗೆ ನಾಗಪಟ್ಟಣಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ಸೂಪ್ ಬಹಳ ರುಚಿಯಾಗಿದೆ’ ಎಂಬ ಅಡಿಬರಹದೊಂದಿಗೆ ಚಿತ್ರವನ್ನು ಪ್ರಕಟಿಸಲಾಗಿತ್ತು. ಹಲ್ಲೆ ನಡೆಸಿದ ನಾಲ್ವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿನೇಶ್ ಕುಮಾರ್, ಅಗಾತಿಯನ್, ಗಣೇಶ್ ಕುಮಾರ್ ಮತ್ತು ಮೋಹನ್ ಕುಮಾರ್ ಎಂಬವರು ಚಿತ್ರ ಪ್ರಕಟಿಸಿದ್ದನ್ನು ಪ್ರಶ್ನಿಸಿ ಫೈಜಾನ್ ಜತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಬೆತ್ತ ಹಾಗೂ ಕಬ್ಬಿಣದ ರಾಡ್ ಬಳಸಿ ಹಲ್ಲೆ ಮಾಡಿದ್ದಾರೆ. ಫೈಜಾನ್ ಅವರ ಮುಖಕ್ಕೆ ಗಾಯವಾಗಿದೆ.ದಿನೇಶ್ ಕುಮಾರ್ ಅವರು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂನ (ಟಿ.ಟಿ.ವಿ. ದಿನಕರನ್ ಅವರ ಪಕ್ಷ) ಸ್ಥಳೀಯ ಘಟಕದ ಪದಾಧಿಕಾರಿ.
ಉತ್ತರ ಭಾರತದಲ್ಲಿ ದನದ ಮಾಂಸಕ್ಕೆ ಸಂಬಂಧಿಸಿ ಕೊಲೆ ಮತ್ತು ಹಲ್ಲೆಗಳು ನಡೆದಿವೆ. ಆದರೆ, ತಮಿಳುನಾಡಿನಲ್ಲಿ ಆಹಾರದ ವಿಚಾರದಲ್ಲಿ ಹಲ್ಲೆ ನಡೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.