ADVERTISEMENT

ವಿರೋಧ ಪಕ್ಷಗಳ ಜೊತೆಗೆ ನಂಟು ಹೊಂದಿರುವುದಾಗಿ ಹೇಳಲು ಒತ್ತಡ: ಆರೋಪಿಗಳ ಹೇಳಿಕೆ

ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿಗಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 16:21 IST
Last Updated 31 ಜನವರಿ 2024, 16:21 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

-ಪಿಟಿಐ ಚಿತ್ರ

ನವದೆಹಲಿ (ಪಿಟಿಐ): ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಆರೋಪಿಗಳ ಪೈಕಿ ಐವರು, ವಿರೋಧ ಪಕ್ಷಗಳ ಜತೆ ತಮಗೆ ನಂಟು ಇದೆ ಎಂಬುದಾಗಿ ಒಪ್ಪಿಕೊಳ್ಳುವಂತೆ ದೆಹಲಿ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ಬುಧವಾರ ತಿಳಿಸಿದ್ದಾರೆ.

ADVERTISEMENT

ಮನೋರಂಜನ್ ಡಿ., ಸಾಗರ್ ಶರ್ಮ, ಲಲಿತ್ ಝಾ, ಅಮೋಲ್ ಶಿಂದೆ ಮತ್ತು ಮಹೇಶ್ ಕುಮಾವತ್ ಅವರು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಹರದೀಪ್ ಕೌರ್ ಅವರ ಎದುರು ಪೊಲೀಸರ ವಿರುದ್ಧ ಈ ಆರೋಪ ಹೊರಿಸಿದ್ದಾರೆ. ನ್ಯಾಯಾಧೀಶರು ಆರೂ ಮಂದಿಯ ನ್ಯಾಯಾಂಗ ಬಂಧನ ಅವಧಿಯನ್ನು ಮಾರ್ಚ್‌ 1ರವರೆಗೆ ವಿಸ್ತರಿಸಿದ್ದಾರೆ.

ಸರಿಸುಮಾರು 70 ಖಾಲಿ ಹಾಳೆಗಳ ಮೇಲೆ ಸಹಿ ಹಾಕುವಂತೆ ತಮ್ಮ ಮೇಲೆ ಒತ್ತಡ ತರಲಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

‘ಆರೋಪಿಗಳಿಗೆ ಕಿರುಕುಳ ನೀಡಲಾಗಿದೆ, ಅವರಿಗೆ ಸಹಿ ಹಾಕುವಂತೆ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ಅಡಿ ತಾವು ತಪ್ಪು ಮಾಡಿರುವುದಾಗಿ ಮತ್ತು ರಾಷ್ಟ್ರೀಯ ಪಕ್ಷಗಳ ಜೊತೆ ನಂಟು ಇದೆ ಎಂಬುದಾಗಿ ಒಪ್ಪಿಕೊಳ್ಳುವಂತೆ ಮಾಡಲು ವಿದ್ಯುತ್ ಶಾಕ್ ನೀಡಲಾಗಿದೆ. ರಾಜಕೀಯ ಪಕ್ಷ/ವಿರೋಧ ಪಕ್ಷದ ನಾಯಕನ ಜೊತೆ ತಮಗೆ ನಂಟು ಇದೆ ಎಂಬುದನ್ನು ಹಾಳೆಯ ಮೇಲೆ ಬರೆಯಲು ಇಬ್ಬರು ಆರೋಪಿಗಳ ಮೇಲೆ ಒತ್ತಡ ತರಲಾಗಿದೆ’ ಎಂದು ಆರೋಪಿಗಳು ಒಟ್ಟಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಈ ವಿಚಾರವಾಗಿ ಪೊಲೀಸರಿಂದ ಪ್ರತಿಕ್ರಿಯೆ ಕೇಳಿದ ಕೋರ್ಟ್‌, ಅರ್ಜಿಯ ವಿಚಾರಣೆಯನ್ನು ಫೆಬ್ರುವರಿ 17ಕ್ಕೆ ಮುಂದೂಡಿದೆ. ಈ ಪ್ರಕರಣದ ಆರನೆಯ ಆರೋಪಿಯಾಗಿರುವ ನೀಲಂ ಆಜಾದ್, ಹಲವು ಖಾಲಿ ಹಾಳೆಗಳ ಮೇಲೆ ಸಹಿ ಹಾಕುವಂತೆ ಪೊಲೀಸರು ತಮ್ಮ ಮೇಲೆ ಒತ್ತಡ ತಂದಿದ್ದರು ಎಂದು ಈ ಹಿಂದೆ ಕೋರ್ಟ್‌ನಲ್ಲಿ ಹೇಳಿದ್ದರು. ನೀಲಂ ಸಲ್ಲಿಸಿರುವ ಅರ್ಜಿಯು ಕೋರ್ಟ್‌ನಲ್ಲಿ ಬಾಕಿ ಇದೆ.

‘ಪಾಲಿಗ್ರಾಫ್/ನಾರ್ಕೊ/ಬ್ರೈನ್ ಮ್ಯಾಪಿಂಗ್ ವೇಳೆ ಪರೀಕ್ಷೆ ನಡೆಸುತ್ತಿದ್ದ ವ್ಯಕ್ತಿಗಳು ಒಂದು ರಾಜಕೀಯ ಪಕ್ಷ/ನಾಯಕನ ಪಾತ್ರದ ಬಗ್ಗೆ ಹೇಳುವಂತೆ ಇಬ್ಬರು ಆರೋಪಿಗಳಿಗೆ ಒತ್ತಡ ತಂದಿದ್ದರು.

‘ತಾವು ಬಳಸುತ್ತಿರುವ ಹಾಗೂ ಹಿಂದೆ ಬಳಸಿದ್ದ ಮೊಬೈಲ್ ಫೋನ್ ಸಂಖ್ಯೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಕೇಳಲಾಯಿತು. ಏರ್‌ಟೆಲ್, ಬಿಎಸ್‌ಎನ್ಎಲ್, ವೊಡಾಫೋನ್ ಕಚೇರಿಗಳಿಗೆ ಭೇಟಿ ನೀಡಿ ಹಳೆಯ ಸಂಖ್ಯೆಯ ಸಿಮ್‌ ಕಾರ್ಡ್‌ ಹಾಗೂ ಹಾಲಿ ಬಳಸುತ್ತಿರುವ ಸಂಖ್ಯೆಯ ಸಿಮ್ ಕಾರ್ಡ್‌ ಪಡೆಯಲಾಯಿತು. ಇದಕ್ಕೆ ಕಾರಣ ಏನು ಎಂಬುದು ಪ್ರಾಸಿಕ್ಯೂಷನ್‌ಗಷ್ಟೇ ಗೊತ್ತು. ಈ ಕಾನೂನುಬಾಹಿರ ಕ್ರಮದ ಸಂದರ್ಭದಲ್ಲಿ ಸಿಮ್‌ ಕಾರ್ಡ್‌ಗಾಗಿ ಆರೋಪಿಗಳು ತಮ್ಮ ಬಯೋಮೆಟ್ರಿಕ್ ವಿವರ ಹಾಗೂ ಸಹಿ ನೀಡಿದ್ದಾರೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸಾಮಾಜಿಕ ಜಾಲತಾಣ ಖಾತೆಗಳು, ಇಮೇಲ್ ವಿಳಾಸ ಮತ್ತು ಫೋನ್‌ನ ಪಾಸ್‌ವರ್ಡ್‌ ನೀಡುವಂತೆ ಒತ್ತಡ ತರಲಾಯಿತು ಎಂದು ಕೂಡ ಆರೋಪಿಗಳು ಹೇಳಿದ್ದಾರೆ.

ಡಿಸೆಂಬರ್ 13ರಂದು ಸಂಸತ್ತಿನ ಕಲಾಪ ನಡೆಯುತ್ತಿದ್ದಾಗ ಸಾಗರ್ ಶರ್ಮ ಮತ್ತು ಮನೋರಂಜನ್ ಅವರು ಲೋಕಸಭೆಯ ಅಂಗಳಕ್ಕೆ ಜಿಗಿದಿದ್ದರು. ಅಲ್ಲಿ ಕ್ಯಾನಿಸ್ಟರ್‌ನಿಂದ ಹಳದಿ ಬಣ್ಣ ಹೊಗೆಯನ್ನು ಹಾಕಿದ್ದರು. ಇದೇ ಸಂದರ್ಭದಲ್ಲಿ ಅಮೋಲ್ ಶಿಂದೆ ಮತ್ತು ನೀಲಂ ಅವರು ಸಂಸತ್ ಕಟ್ಟಡದ ಹೊರಗಡೆ ಕ್ಯಾನಿಸ್ಟರ್‌ನಿಂದ ಬಣ್ಣದ ಹೊಗೆ ಹಾಕಿ ‘ಸರ್ವಾಧಿಕಾರ ನಡೆಯುವುದಿಲ್ಲ’ ಎಂಬ ಘೋಷಣೆ ಕೂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.