ADVERTISEMENT

ಸಂಸತ್ ಭದ್ರತಾ ಲೋಪ: ಖಾಲಿ ಹಾಳೆಗೆ ಸಹಿ ಹಾಕಲು ದೆಹಲಿ ಪೊಲೀಸರ ಒತ್ತಡ– ಆರೋಪ

ಪಿಟಿಐ
Published 31 ಜನವರಿ 2024, 14:13 IST
Last Updated 31 ಜನವರಿ 2024, 14:13 IST
<div class="paragraphs"><p>ಲೋಕಸಭೆ ಭದ್ರತೆ ಭೇದಿಸಿ ದಾಂಧಲೆ ನಡೆಸಿದ ಪ್ರಕರಣದ ಆರೋಪಿಗಳಾದ ಡಿ.ಮನೋರಂಜನ್ ಹಾಗೂ ನೀಲಂ ಆಜಾದ್ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದರು</p></div>

ಲೋಕಸಭೆ ಭದ್ರತೆ ಭೇದಿಸಿ ದಾಂಧಲೆ ನಡೆಸಿದ ಪ್ರಕರಣದ ಆರೋಪಿಗಳಾದ ಡಿ.ಮನೋರಂಜನ್ ಹಾಗೂ ನೀಲಂ ಆಜಾದ್ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆತಂದರು

   

ಪಿಟಿಐ ಚಿತ್ರ

ನವದೆಹಲಿ: ‘ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಸಧನಕ್ಕೆ ಧುಮುಕಿ ಸ್ಮೋಕ್‌ ಕ್ಯಾನ್ ಸಿಂಪಡಿಸಿದ ಕೃತ್ಯದಲ್ಲಿ ವಿರೋಧಪಕ್ಷಗಳೊಂದಿಗೆ ಕೈಜೋಡಿಸಿರುವುದಾಗಿ ಒಪ್ಪಿಕೊಳ್ಳುವಂತೆ ದೆಹಲಿ ಪೊಲೀಸರು ಹಿಂಸೆ ನೀಡಿದ್ದಾರೆ’ ಎಂದು ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದಡಿ ಬಂಧಿತ ಆರು ಜನರಲ್ಲಿ ಐವರು ನ್ಯಾಯಾಲಯದಲ್ಲಿ ಆರೋಪಿಸಿದ್ದಾರೆ.

ADVERTISEMENT

ಮಾರ್ಚ್‌ 1ರವರೆಗೆ ಇವರ ನ್ಯಾಯಾಂಗ ಬಂಧನ ವಿಸ್ತರಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹರ್ದೀಪ್ ಕೌರ್ ಎದುರು ಈ ಹೇಳಿಕೆ ನೀಡಿದ್ದಾರೆ ಎಂದು ಎಂದು ವರದಿಯಾಗಿದೆ.

‘ಸುಮಾರು 70 ಪುಟಗಳ ಖಾಲಿ ಹಾಳೆಗಳ ಮೇಲೆ ಸಹಿ ಹಾಕುವಂತೆ ಹಿಂಸೆ ನೀಡಿ, ಒತ್ತಡ ಹೇರಲಾಗಿದೆ’ ಎಂದು ಆರೋಪಿಗಳಾದ ಡಿ.ಮನೋರಂಜನ್, ಸಾಗರ್ ಶರ್ಮಾ, ಲಲಿತ್ ಜಾ, ಅಮೋಲ್ ಶಿಂದೆ ಹಾಗೂ ಮಹೇಶ್ ಕುಮಾವತ್ ನ್ಯಾಯಾಲಯಕ್ಕೆ ಹೇಳಿದ್ದಾರೆ.

‘ವಿಚಾರಣೆ ವೇಳೆ ವಿದ್ಯುತ್ ಶಾಕ್‌ ಹಾಗೂ ಇನ್ನಿತರ ರೀತಿಯಲ್ಲಿ ಹಿಂಸೆಯನ್ನು ನೀಡಲಾಯಿತು. ಕಾನೂನುಬಾಹಿರ ಚುಟುವಟಿಕೆ (ತಡೆ) ಕಾಯ್ದೆ (UAPA) ಹಾಗೂ ರಾಷ್ಟ್ರೀಯ ಪಕ್ಷಗಳು ಹಾಗೂ ಅವುಗಳ ಮುಖಂಡರೊಂದಿಗಿನ ಒಡನಾಟ ಇರುವುದಾಗಿ ಬರೆದುಕೊಡುವಂತೆ ಇಬ್ಬರು ಆರೋಪಿಗಳ ಮೇಲೆ ಒತ್ತಡ ಹೇರಲಾಗಿದೆ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಆರೋಪಗಳ ಕುರಿತು ಪ್ರತಿಕ್ರಿಯಿಸುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ, ಫೆ. 17ರಂದು ಈ ಕುರಿತು ವಿಚಾರಣೆ ನಡೆಸುವುದಾಗಿ ಹೇಳಿತು.

ಖಾಲಿ ಹಾಳೆಗಳ ಮೇಲೆ ಸಹಿ ಹಾಕುವಂತೆ ಪೊಲೀಸರು ಒತ್ತಡ ಹೇರಿದ್ದಾರೆ ಎಂದು ಆರನೇ ಆರೋಪಿ ನೀಲಂ ಆಜಾದ್ ಅವರು ಹಲವು ಬಾರಿ ಆರೋಪಿಸಿದ್ದರು. ಇವರ ಅರ್ಜಿಯು ನ್ಯಾಯಾಲಯದ ಮುಂದಿದೆ.

‘ವಿಚಾರಣೆ ಸಂದರ್ಭದಲ್ಲಿ ನಡೆಸಲಾದ ಸುಳ್ಳುಪತ್ತೆ/ನಾರ್ಕೊ/ ಮಂಪರು ಪರೀಕ್ಷೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಅಥವಾ ನಾಯಕರ ಒಡನಾಟ ಅಥವಾ ತೊಡಗಿಸಿಕೊಳ್ಳುವಿಕೆ ಕುರಿತು ಪರೀಕ್ಷೆ ನಡೆಸಿದ ವ್ಯಕ್ತಿಗಳು ಪ್ರಶ್ನೆಗಳನ್ನು ಕೇಳಿದ್ದರು’ ಎಂದು ದೂರಿನಲ್ಲಿ ಹೇಳಲಾಗಿದೆ.

ವಿಚಾರಣೆ ಸಂದರ್ಭದಲ್ಲಿ ತಮ್ಮ ಮೊಬೈಲ್‌ ಫೋನ್ ಹಾಗೂ ಸಿಮ್‌ಗಳ ಬಳಕೆ, ಬೆರಳಚ್ಚು, ಪಾಸ್‌ವರ್ಡ್‌ಗಳನ್ನು ಬಲವಂತವಾಗಿ ಪಡೆಯಲಾಗಿದೆ. ಸಾಮಾಜಿಕ ಜಾಲತಾಣಗಳು ಮತ್ತು ಇಮೇಲ್ ಪಾಸ್‌ವರ್ಡ್‌ಗಳನ್ನೂ ಒತ್ತಡ ಹೇರಿ ಪಡೆಯಲಾಯಿತು’ ಎಂದು ಆರೋಪಿಸಿದ್ದಾರೆ.

ಸಂಸತ್‌ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು. ಡಿ.13ರಂದು ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್‌ ಕ್ಯಾನ್‌’ (ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್‌) ಹಾರಿಸಿ ದಾಂದಲೆ ಎಬ್ಬಿಸಿದ್ದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು. 

ಘಟನಾ ಸ್ಥಳದಲ್ಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಲಲಿತಾ ಜಾ ಮತ್ತು ಮಹೇಶ್ ಕುಮಾವತ್ ಎಂಬುವವರನ್ನು ನಂತರ ಬಂಧಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.