ನವದೆಹಲಿ: ಬೆಳಗಾವಿಯ ಬೆತ್ತಲೆ ಪ್ರಕರಣ ಖಂಡಿಸಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ರಾಜ್ಯದ ಬಿಜೆಪಿ ಸಂಸದರು ಸಂಸತ್‌ನ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕ್ಷೇತ್ರದಲ್ಲೇ ಈ ಘಟನೆ ನಡೆದಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಘಟನೆ ನಡೆದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂತ್ರಸ್ತೆಯನ್ನು ಭೇಟಿ ಮಾಡಿಲ್ಲ. ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ’ ಎಂದು ಕೃಷಿ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
‘ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಗೃಹ ಇಲಾಖೆಯ ಮೇಲೆ ಹಿಡಿತ ಇಲ್ಲ. ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ರಾಜ್ಯದ ಜನರ ಕ್ಷಮೆಯಾಚಿಸಬೇಕು’ ಎಂದು ಅವರು ಆಗ್ರಹಿಸಿದರು.
ಸಂಸದ ಡಿ.ವಿ.ಸದಾನಂದ ಗೌಡ ಮಾತನಾಡಿ, ‘ಪ್ರಕರಣದ ನೈಜ ಆರೋಪಿಗಳನ್ನು ಬಿಟ್ಟು ಕಾಟಾಚಾರಕ್ಕೆ ಕೆಲವರನ್ನು ಬಂಧಿಸಲಾಗಿದೆ. ಈ ವಿಷಯವನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರಸ್ತಾಪಿಸುತ್ತೇವೆ’ ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲೂ ಅದೇ ರೀತಿ ಆಗುತ್ತಿದೆ. ಕ್ರಿಮಿನಲ್‌ಗಳ ಜತೆಗೆ ಕಾಂಗ್ರೆಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಅವರನ್ನು ಪೋಷಿಸುತ್ತಿದೆ’ ಎಂದರು.
ಬಿಜೆಪಿಯಿಂದ ಸತ್ಯಶೋಧನಾ ಸಮಿತಿ
ಬೆಳಗಾವಿ ಘಟನೆಯ ಕುರಿತು ಸತ್ಯಶೋಧನೆ ನಡೆಸಲು ನಾಲ್ವರು ಸಂಸದರನ್ನು ಒಳಗೊಂಡ ಐವರ ಸಮಿತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ರಚಿಸಿದ್ದಾರೆ. ಈ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತೆ ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ವಾಸ್ತವ ಸ್ಥಿತಿ ಅರಿಯಲಿದೆ. ಬಳಿಕ ಅಧ್ಯಕ್ಷರಿಗೆ ವರದಿ ಸಲ್ಲಿಸಲಿದೆ. ಸಮಿತಿಯಲ್ಲಿ ಸಂಸದರಾದ ಅಪರಾಜಿತ ಸಾರಂಗಿ ಸುನಿತಾ ದುಗ್ಗಲ್ ಲಾಕೆಟ್ ಚಟರ್ಜಿ ರಂಜಿತಾ ಕೊಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಇರಲಿದ್ದಾರೆ. ಘಟನಾ ಸ್ಥಳಕ್ಕೆ ಸಮಿತಿಯು ಶನಿವಾರ ಭೇಟಿ ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.