ADVERTISEMENT

ಬ್ಯಾಂಕ್ ನೌಕರರ ವಿಶೇಷ ಸೌಲಭ್ಯಕ್ಕೆ ತೆರಿಗೆ ಅನ್ವಯ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 9 ಮೇ 2024, 0:30 IST
Last Updated 9 ಮೇ 2024, 0:30 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಬ್ಯಾಂಕ್‌ ನೌಕರರು ಪಡೆಯುವ ಬಡ್ಡಿರಹಿತ ಸಾಲ ಸೌಲಭ್ಯ ಅಥವಾ ರಿಯಾಯಿತಿ ದರದ ಸಾಲಸೌಲಭ್ಯವು ವಿಶೇಷವಾದ ಒಂದು ಸವಲತ್ತು ಇದ್ದಂತೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಈ ಸವಲತ್ತುಗಳಿಗೆ ಆದಾಯ ತೆರಿಗೆ ಕಾಯ್ದೆಯ ಅಡಿ ತೆರಿಗೆ ಅನ್ವಯವಾಗುತ್ತದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರು ಇದ್ದ ವಿಭಾಗೀಯ ಪೀಠವು, ಎಸ್‌ಬಿಐ ನಿಗದಿ ಮಾಡಿರುವ ಬಡ್ಡಿ ದರವನ್ನು ಮಾನದಂಡ ಎಂದು ಪರಿಗಣಿಸಿರುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಸಾರಿದೆ.

‘ವಾಣಿಜ್ಯ ಮತ್ತು ತೆರಿಗೆ ಕಾನೂನುಗಳು ತೀರಾ ಸೂಕ್ಷ್ಮವಾಗಿ, ಸಂಕೀರ್ಣವಾಗಿ ಇರುತ್ತವೆ. ದುರ್ಬಳಕೆಯ ಸಾಧ್ಯತೆಗಳನ್ನು ತಡೆಯುವ ಹಾಗೂ ನಿಶ್ಚಿತತೆಯನ್ನು ಹೆಚ್ಚುಮಾಡುವ ಶಾಸನಗಳ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಈ ನ್ಯಾಯಾಲಯ ಬಯಸುವುದಿಲ್ಲ’ ಎಂದು ಪೀಠ ಹೇಳಿದೆ.

ADVERTISEMENT

ಸಂಕೀರ್ಣ ಸಮಸ್ಯೆಯೊಂದನ್ನು ಒಂದೇ ಒಂದು ಸೂತ್ರದ ಮೂಲಕ ಬಗೆಹರಿಸಲಾಗಿದೆ. ಇದಕ್ಕೆ ನ್ಯಾಯಾಂಗ ಸಮ್ಮತಿ ಸೂಚಿಸಬೇಕಾಗುತ್ತದೆ ಎಂದು ಕೂಡ ಹೇಳಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಅರ್ಜಿಯನ್ನು ಪೀಠವು ತಿರಸ್ಕರಿಸಿದೆ.

ವಿಶೇಷ ಸೌಲಭ್ಯಗಳನ್ನು ಲೆಕ್ಕಹಾಕಲು ಒಂದೇ ಮಾನದಂಡವನ್ನು ನಿಗದಿ ಮಾಡುವ ಮೂಲಕ ನಿಯಮವು ಅನಗತ್ಯ ವ್ಯಾಜ್ಯಗಳನ್ನು ನಿಯಂತ್ರಿಸುವ ಕೆಲಸ ಮಾಡಿದೆ ಎಂದು ಕೋರ್ಟ್ ಹೇಳಿದೆ. ಮೇ 7ರಂದು ನೀಡಿರುವ ತೀರ್ಪಿನಲ್ಲಿ ಕೋರ್ಟ್‌ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 17(2)(8)ನ್ನು ಮಾನ್ಯ ಮಾಡಿದೆ.

ನಿಯಮಗಳ ಅನ್ವಯ ಬ್ಯಾಂಕ್‌ಗಳು ತಮ್ಮ ನೌಕರರಿಗೆ ಒದಗಿಸುವ ಬಡ್ಡಿರಹಿತ ಸಾಲ ಸೌಲಭ್ಯ ಅಥವಾ ರಿಯಾಯಿತಿ ಬಡ್ಡಿ ದರದ ಸಾಲ ಸೌಲಭ್ಯವನ್ನು ವಿಶೇಷ ಸೌಲಭ್ಯ ಎಂದು ಪರಿಗಣಿಸಿ, ಅವು ವಿಧಿಸುವ ಬಡ್ಡಿ ದರವು ಎಸ್‌ಬಿಐ ನಿಗದಿ ಮಾಡಿರುವ ಸಾಲದ ಬಡ್ಡಿ ದರಕ್ಕಿಂತ ಕಡಿಮೆ ಇದ್ದರೆ ಅವುಗಳಿಗೆ ತೆರಿಗೆ ವಿಧಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.