ಕೋಲ್ಕತ್ತ: ‘ನಬನ್ನಾ ಅಭಿಯಾನ್’ ಪ್ರತಿಭಟನಾ ರ‍್ಯಾಲಿ ವೇಳೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ 12 ಗಂಟೆಗಳ ಕಾಲ ‘ಬಂಗಾಳ ಬಂದ್’ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಾದ್ಯಂತ ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನಬನ್ನಾ ಅಭಿಯಾನ್’ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಪಶ್ಚಿಮ ಬಂಗಾಳ ಸರ್ಕಾರದ ಸಚಿವಾಲಯದ ಕಡೆ ನುಗ್ಗಲು ಪ್ರಯತ್ನಿಸಿದಾಗ ಕೋಲ್ಕತ್ತ ಹಾಗೂ ನೆರೆಯ ಹೌರಾದ ಕೆಲವು ಪ್ರದೇಶಗಳಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಂಗಳವಾರ ಸಂಘರ್ಷ ಉಂಟಾಗಿತ್ತು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಎಲ್ಲೆಡೆ ನಿಯೋಜಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡೆಂಡಪ್ ಶೆರ್ಪಾ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಬಸ್‌ಗಳ ಚಾಲಕರು ಮತ್ತು ಕಂಡಕ್ಟರ್‌ಗಳಿಗೆ ಹೆಲ್ಮೆಟ್ ಧರಿಸಲು ಸೂಚನೆ ನೀಡಲಾಗಿದೆ. ಅದರಂತೆ ಕೂಚ್ ಬೆಹಾರ್‌ನಲ್ಲಿ ಉತ್ತರ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆಯ (ಎನ್‌ಬಿಎಸ್‌ಟಿಸಿ) ಬಸ್‌ಗಳ ಚಾಲಕರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿದ್ದಾರೆ.
‘ಬಂದ್‌ಗೆ ಕರೆ ನೀಡಿರುವುದರಿಂದ ಸಾರಿಗೆ ಸಂಸ್ಥೆ ಎಲ್ಲರಿಗೂ ಹೆಲ್ಮೆಟ್‌ಗಳನ್ನು ನೀಡಿದೆ. ಹಾಗಾಗಿ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸುತ್ತಿದ್ದೇವೆ’ ಎಂದು ಬಸ್ ಚಾಲಕರೊಬ್ಬರು ‘ಎಎನ್‌ಐ’ಗೆ ತಿಳಿಸಿದ್ದಾರೆ.
‘ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಸರ್ಕಾರ ಆದೇಶಿಸಿದೆ. ಆದರೂ ನನಗೆ ಸ್ವಲ್ಪ ಭಯವಾಗುತ್ತಿದೆ ಎಂದು ಮತ್ತೊಬ್ಬ ಬಸ್ ಚಾಲಕ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 9ರಂದು ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆಯ ಕಾರಣಕ್ಕೆ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದು, ಈ ಒತ್ತಾಯದೊಂದಿಗೆ ರಾಜ್ಯದ ಸಚಿವಾಲಯ ತಲುಪಲು ಅವರು ಯತ್ನಿಸಿದ್ದರು.
ರಾಜ್ಯದ ಸಚಿವಾಲಯದ ಕಡೆ ಸಾಗುವ ಮಾರ್ಗಕ್ಕೆ ಅಡ್ಡವಾಗಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಉರುಳಿಸಲು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ಯತ್ನಿಸಿದ್ದರು. ಇದರಿಂದಾಗಿ ನಡೆದ ಘರ್ಷಣೆಯಲ್ಲಿ ಪೊಲೀಸರು ಹಾಗೂ ಪ್ರತಿಭಟನಕಾರರು ಗಾಯಗೊಂಡಿದ್ದರು.
ಭದ್ರತಾ ಪಡೆಗಳ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು. ಜಲಫಿರಂಗಿ ಬಳಸಿ ನೀರು ಹಾರಿಸಿದ್ದರು. ಅಲ್ಲದೆ, ಅಶ್ರುವಾಯು ಶೆಲ್ ಕೂಡ ಪ್ರಯೋಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.