ಕೋಲ್ಕತ್ತ: ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಅವರು ಜನವರಿ 22ರಂದು ರಜೆ ಘೋಷಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಶ್ಚಿಮ ಬಂಗಾಳದ ಮಕ್ಕಳು ಸಂತೋಷ ಪಡಲು ಜನವರಿ 22ರಂದು ಶಾಲೆಗಳಿಗೆ ರಜೆ ಘೋಷಿಸಲು ಪರಿಗಣಿಸುವಂತೆ ನಾನು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ವಿನಂತಿಸಿದ್ದೇನೆ’ ಎಂದು ತಿಳಿಸಿದ್ದಾರೆ.
ಜನವರಿ 22 ದೇಶಕ್ಕೆ ಹೆಮ್ಮೆಯ ದಿನವಾಗಿದೆ ಎಂದು ಪತ್ರದಲ್ಲಿ ಬರೆದಿರುವ ಮಜುಂದಾರ್, ರಾಮಮಂದಿರದ ಸಂದರ್ಭದಲ್ಲಿ ನಡೆದ ಹೋರಾಟ ಮತ್ತು ಪರಿಶ್ರಮದ ಕುರಿತು ಪತ್ರದಲ್ಲಿ ಹಂಚಿಕೊಂಡಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ಶುಭ ದಿನದಂದು ಜನರು ಭಾಗವಹಿಸಲು ಅನುಕೂಲವಾಗುವಂತೆ, ಆ ದಿನವನ್ನು ರಜೆ ಎಂದು ಅಧಿಕೃತವಾಗಿ ಘೋಷಿಸಲು ವಿನಂತಿಸಿದ್ದಾರೆ.
ಬಿಜೆಪಿ–ಬಂಗಾಳ ಜನವರಿ 22ಅನ್ನು ಮಂಗಳಕರ ದಿನವನ್ನಾಗಿ ಆಚರಿಸಲು ಸಜ್ಜಾಗಿದೆ. ಈ ನಡುವೆ ತೃಣಮೂಲ ಕಾಂಗ್ರೆಸ್ ಕೋಲ್ಕತ್ತದಲ್ಲಿ ಸರ್ವಧರ್ಮ ರ್‍ಯಾಲಿಯನ್ನು ಹಮ್ಮಿಕೊಂಡಿದೆ.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ದಿನದಂದೇ ರ್‍ಯಾಲಿ ನಡೆಯುವುದರಿಂದ ಶಾಂತಿ ಭಂಗವಾಗುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ್ದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ರ್‍ಯಾಲಿ ನಡೆಸಲು ತೃಣಮೂಲ ಕಾಂಗ್ರೆಸ್‌ಗೆ ಕೋಲ್ಕತ್ತ ಹೈಕೋರ್ಟ್ ಅನುಮತಿ ನೀಡಿದೆ. ರ್‍ಯಾಲಿ ನಡೆಯುವ ವೇಳೆ ಶಾಂತಿ ಕಾಯ್ದುಕೊಳ್ಳಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.