ADVERTISEMENT

ಬಿಜೆಪಿಗೆ ತಿರುಗುಬಾಣವಾಗುವುದೇ ಟೀಕೆ?

ಸುಶಿಕ್ಷಿತ ವಲಯ ದೂರ ಸರಿಯುವ ಆತಂಕ, ಟಿಎಂಸಿಗೆ ಹೊಸ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 19:45 IST
Last Updated 19 ಅಕ್ಟೋಬರ್ 2019, 19:45 IST
   

ಕೋಲ್ಕತ್ತ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ವಿರುದ್ಧ ಟಿಕಾ ಪ್ರಹಾರ ಮಾಡಿರುವ ಬಿಜೆಪಿಗೆ ಈಗ ಆ ಟೀಕೆಗಳೇ ಪಶ್ಚಿಮ ಬಂಗಾಳದಲ್ಲಿ ತಿರುಗುಬಾಣವಾಗುವ ಲಕ್ಷಣ ಗೋಚರಿಸಲಾರಂಭಿಸಿವೆ.

ಪಶ್ಚಿಮ ಬಂಗಾಳದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಅಧಿಕಾರ ಹಿಡಿಯಬೇಕೆಂಬ ಬಿಜೆಪಿಯ ಕನಸಿಗೆ ಈ ಟೀಕೆಯು ಬ್ರೇಕ್‌ ಹಾಕುವ ಸಾಧ್ಯತೆ ಇದೆ.

ಮೋದಿ ಸರ್ಕಾರ ಮತ್ತು ಅದರ ನೀತಿಗಳನ್ನು ವಿಮರ್ಶೆಗೆ ಒಳಪಡಿಸಿದ್ದ ಬ್ಯಾನರ್ಜಿ ವಿರುದ್ಧ ಸ್ವಲ್ಪ ತಡವಾಗಿ ಟೀಕೆ ಆರಂಭಿಸಿದ ಬಿಜೆಪಿಯು, ‘ಬ್ಯಾನರ್ಜಿ ಎಡಪಂಥೀಯ ಧೋರಣೆ ತಳೆದಿರುವ ವ್ಯಕ್ತಿ. ಅವರ ಎಲ್ಲಾ ಮಾತುಗಳನ್ನು ಕೇಳಬೇಕಾಗಿಲ್ಲ’ ಎಂದಿತ್ತು.

ADVERTISEMENT

ಕೇಂದ್ರದ ನಾಯಕರಿಂದ ಪ್ರೇರಣೆ ಪಡೆದು ರಾಜ್ಯದ ನಾಯಕರೂ ಬ್ಯಾನರ್ಜಿ ಅವರನ್ನು ಟೀಕಿಸಿದ್ದರು. ‘ಎರಡು ಬಾರಿ ಮದುವೆಯಾಗುವುದು ಮತ್ತು ವಿದೇಶಿ ಪತ್ನಿಯನ್ನು ಹೊಂದಿರುವುದು ನೊಬೆಲ್‌ ಪ್ರಶಸ್ತಿಗೆ ಮಾನದಂಡವೇ ಎಂದು ಅಚ್ಚರಿಯಾಗುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ರಾಹುಲ್‌ ಸಿನ್ಹಾ ಟೀಕಿಸಿದ್ದರು. ಇದಲ್ಲದೆ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಅವರು, ‘ಬ್ಯಾನರ್ಜಿ ಅರ್ಧ ಬಂಗಾಳಿ’ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಬ್ಯಾನರ್ಜಿ ಅವರ ತಾಯಿ ಮಹಾರಾಷ್ಟ್ರದವರು.

ರಾಜ್ಯದ ಅರ್ಥಶಾಸ್ತ್ರಜ್ಞರೊಬ್ಬರಿಗೆ ನೊಬೆಲ್‌ ಪ್ರಶಸ್ತಿ ಬಂದಿರುವುದು ಪಶ್ಚಿಮ ಬಂಗಾಳದ ಜನರಿಗೆ, ವಿಶೇಷವಾಗಿ ನಗರದ ಸುಶಿಕ್ಷಿತರಿಗೆ ಹೆಮ್ಮೆ ಮೂಡಿಸಿದೆ. ಅವರನ್ನು ಟೀಕಿಸಿದ್ದರಿಂದ ಈ ವರ್ಗವು ಬಿಜೆಪಿಯಿಂದ ದೂರವಾಗುವ ಸಾಧ್ಯತೆ ಇದೆ ಎಂಬುದು ಬಿಜೆಪಿಯ ಸ್ಥಳೀಯ ನಾಯಕರ ಆತಂಕವಾಗಿದೆ.

‘ಬಿಜೆಪಿಯು ಬಂಗಾಳಿ ವಿರೊಧಿ’ ಎಂದು ತೃಣಮೂಲ ಕಾಂಗ್ರೆಸ್‌ ಪಕ್ಷ (ಟಿಎಂಸಿ) ಹಿಂದಿನಿಂದಲೂ ಆರೋಪಿಸುತ್ತಾ ಬಂದಿದ್ದು, ಇಂಥ ಟೀಕೆಗಳ ಮೂಲಕ ಬಿಜೆಪಿಯು ತನ್ನ ವಿರೋಧಿಗೆ ಆಹಾರ ಒದಗಿಸಿದಂತಾಗಿದೆ. ‘ಬ್ಯಾನರ್ಜಿ ಅವರು ಬಂಗಾಳಿ ಎಂಬ ಕಾರಣಕ್ಕೆ ಅವರನ್ನು ಈ ರೀತಿ ಅವಮಾನಿಸಪಾಗುತ್ತಿದೆಯೇ’ ಎಂದು ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಸಿಪಿಎಂ ಪಕ್ಷವೂ ಬಿಜೆಪಿಯ ಟೀಕೆಯನ್ನು ಖಂಡಿಸಿವೆ.

ಪಶ್ಚಿಮ ಬಂಗಾಳದ ಸುಶಿಕ್ಷಿತ ಸಮುದಾಯವು ಬ್ಯಾನರ್ಜಿ ವಿರುದ್ಧ ಬಿಜೆಪಿ ನೀಡಿರುವ ಹೇಳಿಕೆಗಳನ್ನು ಸ್ವೀಕರಿಸಲು ಸಿದ್ಧವಿಲ್ಲ. ರವೀಂದ್ರನಾಥ ಟ್ಯಾಗೋರರಿಂದ ಆರಂಭಿಸಿ ಬ್ಯಾನರ್ಜಿವರೆಗೆ ಪಶ್ಚಿಮ ಬಂಗಾಳದ ಮೂವರಿಗೆ ನೊಬೆಲ್‌ ಪ್ರಶಸ್ತಿ ಲಭಿಸಿದೆ ಎಂದು ಈ ವರ್ಗವು ಹೆಮ್ಮೆ ಪಡುತ್ತದೆ. ಇವರ ವಿರುದ್ಧ ಮಾಡಿದ್ದ ಇಂಥ ಟೀಕೆಯು ಬಿಜೆಪಿಗೆ ರಾಜಕೀಯವಾಗಿ ಹಾನಿ ಉಂಟುಮಾಡಬಲ್ಲದು ಎಂದು ವಿಶ್ಲೇಷಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.