ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕೋವಿಡ್–19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಸಂಬಂಧಿಸಿದಂತೆ, ರೈಲ್ವೆ ಇಲಾಖೆ ವಿರುದ್ಧ ಕಿಡಿಕಾರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರೈಲ್ವೆಯು ಓಡಿಸುತ್ತಿರುವುದು ಕೊರೊನಾ ಎಕ್ಸ್‌ಪ್ರೆಸ್‌ಗಳನ್ನೇ ಹೊರತು ಶ್ರಮಿಕ್ವಿಶೇಷ ರೈಲುಗಳನ್ನಲ್ಲ ಎಂದು ಆರೋಪಿಸಿದ್ದಾರೆ.
ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ಶ್ರಮಿಕ್ ವಿಶೇಷ ರೈಲು ಪ್ರಯಾಣ ಆರಂಭಿಸಿದೆ.
ಹೆಚ್ಚಿನ ಸಂಖ್ಯೆಯ ವಲಸಿಗರಿಗೆ ಸಾಕಷ್ಟು ರೈಲುಗಳನ್ನು ವ್ಯವಸ್ಥೆ ಮಾಡದೆ, ಅವರನ್ನೆಲ್ಲ ಒಂದೇ ರೈಲಿನಲ್ಲಿ ತುಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಮತಾ, ‘ಶ್ರಮಿಕ್ ವಿಶೇಷ ರೈಲುಗಳ ಹೆಸರಿನಲ್ಲಿ ರೈಲ್ವೆ ಇಲಾಖೆಯು ಕೊರೊನಾ ಎಕ್ಸ್‌ಪ್ರೆಸ್‌ಗಳನ್ನು ಓಡಿಸುತ್ತಿದೆ’ ಎಂದು ಹೇಳಿದ್ದಾರೆ.
‘ಸಾವಿರಾರು ವಲಸೆ ಕಾರ್ಮಿಕರನ್ನು ಒಂದೇ ರೈಲಿನಲ್ಲಿ ಕಳುಹಿಸಲಾಗುತ್ತಿದೆ. ಅವರಿಗಾಗಿ ಹೆಚ್ಚಿನ ರೈಲುಗಳನ್ನು ಏಕೆ ವ್ಯವಸ್ಥೆ ಮಾಡಿಲ್ಲ’ ಎಂದೂ ಅವರು ಪ್ರಶ್ನಿಸಿದ್ದಾರೆ.
ವಲಸಿಗರು ತಮ್ಮ ತಮ್ಮ ರಾಜ್ಯಗಳಿಗೆ ಹಿಂದಿರುವುಗುವುದಕ್ಕೆ ಸಂಬಂಧಿಸಿದಂತೆ ಗುರುವಾರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ‘ವಲಸಿಗರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಯಾವುದೇ ರಾಜ್ಯಹೇಳುವಂತಿಲ್ಲ. ಕಾರ್ಮಿಕರು ತಮ್ಮ ರಾಜ್ಯಗಳಿಗೆ ರೈಲು ಮತ್ತು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಬೇಕು’ ಎಂದಿತ್ತು.
ಮಾತ್ರವಲ್ಲದೆ, ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡುವಂತೆಯೂ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.