ಕೋಲ್ಕತ್ತ: ಥಲಸೇಮಿಯಾದಿಂದ ಬಳಲುತ್ತಿದ್ದ ತನ್ನ ಐದು ವರ್ಷದ ಮೊಮ್ಮಗನ ಚಿಕಿತ್ಸೆಗಾಗಿ 50 ವರ್ಷದ ವೃದ್ಧೆಯೊಬ್ಬರು ಬರೋಬ್ಬರಿ 130 ಕಿ.ಮೀ. ದೂರದ ಹಾದಿಯನ್ನು ಸೈಕಲ್‌ನಲ್ಲಿ ಸವೆಸಿದ್ದಾರೆ!
ಪಶ್ಚಿಮ ಬಂಗಾಳದ ಝಾರ್‌ಗ್ರಾಮ್ ಜಿಲ್ಲೆಯ ಸುರಿಧಿಹ ಗ್ರಾಮದ ವೃದ್ಧೆ ಮಾಲತಿ ತುದು ಈ ಸಾಹಸ ಮೆರೆದವರು.
ಐದು ತಿಂಗಳಿದ್ದಾಗಲೇ ಥಲಸೇಮಿಯಾದ ಬಳಲುತ್ತಿದ್ದ ಮೊಮ್ಮಗನಿಗೆ ಮಾಲತಿ ಭೇಲ್‌ಪಹರಿ ಪ್ರದೇಶದ ಜಿಲ್ಲಾ ಆಸ್ಪತ್ರೆಯಲ್ಲಿ ‘ಎ’ ಪಾಸಿಟಿವ್ರಕ್ತ ಮರುಪೂರಣ ಮಾಡಿಸುತ್ತಿದ್ದರು. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿದ್ದ ಅಂಬುಲೆನ್ಸ್ ಮೂಲಕ ಮಾರ್ಚ್ 30ರ ತನಕ ಮೊಮ್ಮಗನನ್ನು ಮಾಲತಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಚ್ 30ರ ಬಳಿಕ ಲಾಕ್‌ಡೌನ್ ಸಮಯದಲ್ಲಿ ಅಂಬುಲೆನ್ಸ್ ರಿಪೇರಿಗೆ ಹೋಗಿದ್ದ ಕಾರಣ ಮಾಲತಿ ಅವರಿಗೆ ಮೊಮ್ಮಗನಿಗೆ ಚಿಕಿತ್ಸೆ ಕೊಡಿಸಲು ಸಮಸ್ಯೆ ಎದುರಾಯಿತು.
ಲಾಕ್‌ಡೌನ್ ಇದ್ದುದ್ದರಿಂದ ಇತರ ವಾಹನವೂ ಸಿಗಲಿಲ್ಲ. ಆದರೆ, ಅಷ್ಟಕ್ಕೇ ಹತಾಶರಾಗದ ಮಾಲತಿ, ದಿಂಬಿನ ಮೇಲೆ ಮೊಮ್ಮಗನನ್ನು ಮಲಗಿಸಿಕೊಂಡೇ ಮೇ 4ರಂದು ಸೈಕಲ್ ಮೇಲೆ 65 ಕಿ.ಮೀ. ಕ್ರಮಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು.
ಆದರೆ, ಅಲ್ಲಿ ಮೊಮ್ಮಗನಿಗೆ ಬೇಕಾಗಿದ್ದ ಎ ಪಾಸಿಟಿವ್ ರಕ್ತ ಇರಲಿಲ್ಲ. ಲಾಕ್‌ಡೌನ್ ಇದ್ದುದ್ದರಿಂದ ದಾನಿಗಳೂ ಮುಂದೆ ಬರಲಿಲ್ಲ. ಕೊನೆಗೆ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರ ಪ್ರಯತ್ನದಿಂದ ರಕ್ತದಾನಿಯೊಬ್ಬರು ಮುಂದೆ ಬಂದರು. ಮೊಮ್ಮಗನಿಗೆ ರಕ್ತ ಮರುಪೂರಣ ಮಾಡಿದ ಬಳಿಕ ಮಾಲತಿ ಸೈಕಲ್‌ನಲ್ಲಿ ಮತ್ತೆ 65 ಕಿ.ಮೀ. ಕ್ರಮಿಸಿ ತಮ್ಮ ಹಳ್ಳಿಗೆ ತಲುಪಿದರು.
ಅಂದ ಹಾಗೆ ಮೇ 8 ವಿಶ್ವ ಥಲಸೇಮಿಯಾ ದಿನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.