ADVERTISEMENT

ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲು ಅಪಘಾತ ಸಂಭವಿಸಿದ ಮಾರ್ಗದಲ್ಲಿ ಇಲ್ಲ ‘ಕವಚ್’

ಪಿಟಿಐ
Published 17 ಜೂನ್ 2024, 12:54 IST
Last Updated 17 ಜೂನ್ 2024, 12:54 IST
ರೈಲ್ವೆ ಮಂಡಳಿ ಅಧ್ಯಕ್ಷೆ ಜಯಾ ವರ್ಮಾ ಸಿನ್ಹಾ –ಪಿಟಿಐ ಚಿತ್ರ
ರೈಲ್ವೆ ಮಂಡಳಿ ಅಧ್ಯಕ್ಷೆ ಜಯಾ ವರ್ಮಾ ಸಿನ್ಹಾ –ಪಿಟಿಐ ಚಿತ್ರ   

ಕೋಲ್ಕತ್ತ: ರೈಲುಗಳ ನಡುವೆ ಢಿಕ್ಕಿ ಆಗುವುದನ್ನು ತಪ್ಪಿಸುವ ‘ಕವಚ್’ ವ್ಯವಸ್ಥೆಯನ್ನು ಗುವಾಹಟಿ–ದೆಹಲಿ ರೈಲು ಮಾರ್ಗದಲ್ಲಿ ಅಳವಡಿಸಿಲ್ಲ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷೆ ಜಯಾ ವರ್ಮಾ ಸಿನ್ಹಾ ಹೇಳಿದ್ದಾರೆ. ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಸರಕು ಸಾಗಣೆ ರೈಲೊಂದು ಢಿಕ್ಕಿ ಹೊಡೆದಿರುವುದು ಇದೇ ಮಾರ್ಗದಲ್ಲಿ.

ಈ ಮಾರ್ಗದಲ್ಲಿ ಕವಚ್ ವ್ಯವಸ್ಥೆಯನ್ನು ಅಳವಡಿಸುವ ಯೋಜನೆ ಇದೆ ಎಂದು ಸಿನ್ಹಾ ಹೇಳಿದ್ದಾರೆ. ಸರಕು ಸಾಗಣೆ ರೈಲಿನ ಚಾಲಕ ಸಿಗ್ನಲ್‌ಗಳನ್ನು ಉಪೇಕ್ಷಿಸಿದ ಕಾರಣಕ್ಕೆ ಅಪಘಾತ ಉಂಟಾಗಿರಬಹುದು ಎಂದು ಅವರು ತಿಳಿಸಿದ್ದಾರೆ.

ಗಾರ್ಡ್‌ ಇರುವ ಬೋಗಿ ಹಾಗೂ ರೈಲಿನ ಪಾರ್ಸೆಲ್‌ ವ್ಯಾನ್‌ಗಳಿಗೆ ಹಾನಿ ಆಗಿದೆ. ಹೀಗಾಗಿ ಪ್ರಯಾಣಿಕರ ಕೋಚ್‌ಗೆ ಹೆಚ್ಚಿನ ಹಾನಿ ಉಂಟಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಕವಚ್ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯವನ್ನು ತ್ವರಿತವಾಗಿ ಮಾಡಲಾಗುತ್ತಿದೆ. ಈ ವ್ಯವಸ್ಥೆಯು ಒಟ್ಟು 1,500 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ ಅಳವಡಿಕೆ ಆಗಿದೆ. ಈ ವರ್ಷದ ಅಂತ್ಯದ ವೇಳೆಗೆ ಇನ್ನೂ 3,000 ಕಿ.ಮೀ. ಉದ್ದದ ಮಾರ್ಗಕ್ಕೆ ಇದನ್ನು ಅಳವಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕವಚ್ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯವು ವೇಗ ಪಡೆದುಕೊಳ್ಳಬೇಕು ಎಂದಾದರೆ ಅದನ್ನು ಪೂರೈಸುವ ಕಂಪನಿಗಳು ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದಿದ್ದಾರೆ.

ರೈಲು ಕಾರ್ಯಾಚರಣೆಯು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲು ನಾವು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.
ಜಯಾ ವರ್ಮಾ ಸಿನ್ಹಾ, ರೈಲ್ವೆ ಮಂಡಳಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.