ಗುವಾಹಟಿ: ಬಂಗಾಳಿ ಮಾತನಾಡುವ ಮುಸ್ಲಿಮರು ಬಾಲ್ಯ ವಿವಾಹ, ಬಹುಪತ್ನಿತ್ವದಂತಹ ಆಚರಣೆಗಳನ್ನು ತ್ಯಜಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಭಾನುವಾರ ಒತ್ತಾಯಿಸಿದ್ದಾರೆ.
ಈ ಹಿಂದೆ ಬಾಂಗ್ಲಾದೇಶ ಮೂಲದ ಹೆಚ್ಚಿನ ಮುಸ್ಲಿಮರು ಇಂತಹ ಕೆಟ್ಟ ಆಚರಣೆ ಪದ್ಧತಿಗಳನ್ನು ಹೊಂದಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದರು.
'ಬಂಗಾಳಿ ಮಾತನಾಡುವ ಮುಸ್ಲಿಮರು (Miyas) 'ಸ್ಥಳೀಯರು' ಅಥವಾ ಅಲ್ಲವೇ ಎಂಬುದು ಬೇರೆ ವಿಷಯ. ಆದರೆ ನಾನು ಹೇಳುವುದು ಏನೆಂದರೆ, ನೀವು ಸ್ಥಳೀಯರಾಗುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಅದಕ್ಕಾಗಿ ಬಾಲ್ಯವಿವಾಹ ಮತ್ತು ಬಹುಪತ್ನಿತ್ವದಂತಹ ಪದ್ಧತಿಗಳನ್ನು ತ್ಯಜಿಸಬೇಕು. ಇದರ ಬದಲು ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸಬೇಕು' ಎಂದು ಹೇಳಿದ್ದಾರೆ.
'ಅಸ್ಸಾಂ ಜನರು ಹೆಣ್ಣು ಮಕ್ಕಳನ್ನು 'ಶಕ್ತಿ' (ದೇವತೆ)ಗೆ ಹೋಲಿಸುವ ಸಂಸ್ಕೃತಿಯನ್ನು ಹೊಂದಿದ್ದಾರೆ. ಆದರೆ ಎರಡು-ಮೂರು ಸಲ ಮದುವೆಯಾಗುವುದು ಅಸ್ಸಾಂನ ಸಂಸ್ಕೃತಿಯಲ್ಲ. ಬಂಗಾಳಿ ಮಾತನಾಡುವ ಮುಸ್ಲಿಮರು ಅಸ್ಸಾಂ ಸಂಪ್ರದಾಯವನ್ನು ಅನುಸರಿಸಿದರೆ, ಅವರನ್ನೂ ಸ್ಥಳೀಯರು ಎಂದು ಪರಿಗಣಿಸಲಾಗುತ್ತದೆ' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.