ನವದೆಹಲಿ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಯ ಹಾದಿಗೆ ಕೊಡುಗೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ರೀಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ಹೆದ್ದಾರಿ ಕರ್ನಾಟಕದ ಬೆಳವಣಿಗೆಗೆ ಪೂರಕ ಎಂದಿದ್ದಾರೆ.
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆಯು ಶ್ರೀರಂಗಪಟ್ಟಣ, ಕೊಡಗು, ಊಟಿ ಮತ್ತು ಕೇರಳದಂತಹ ಪ್ರದೇಶಗಳ ನಡುವಿನ ಸಂಪರ್ಕ ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಗಡ್ಕರಿ ಹೆದ್ದಾರಿಯ ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದರು.
ಈ ಯೋಜನೆಯು ಎನ್‌ಎಚ್-275 ರ ಒಂದು ಭಾಗವನ್ನು ಒಳಗೊಂಡಿದೆ. ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ಮಹತ್ವದ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‌ಪಾಸ್‌ಗಳು ಮತ್ತು ಮೇಲ್ಸೇತುವೆಗಳ ಅಭಿವೃದ್ಧಿಯನ್ನು ಸಹ ಒಳಗೊಂಡಿದೆ ಎಂದು ಗಡ್ಕರಿ ಟ್ವೀಟ್‌ನಲ್ಲಿ ತಿಳಿಸಿದ್ದರು.
118 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಆರು ಮುಖ್ಯ ಪಥಗಳನ್ನು ಮತ್ತು ಎರಡೂ ಬದಿಗಳಲ್ಲಿ ಎರಡು ಸರ್ವಿಸ್ ರಸ್ತೆ ಲೇನ್‌ಗಳನ್ನು ಹೊಂದಿದೆ. ‘ಭಾರತಮಾಲಾ ಪರಿಯೋಜನೆ’ ಅಡಿಯಲ್ಲಿ ಸುಮಾರು ₹8,478 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿ ಅಭಿವೃದ್ಧಿಪಡಿಸಲಾಗಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು ಮೂರು ಗಂಟೆಗಳಿಂದ ಸುಮಾರು 75 ನಿಮಿಷಗಳಿಗೆ ತಗ್ಗಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.