ಬೆಂಗಳೂರು:ಆಗಸದಲ್ಲಿ ತ್ರಿವರ್ಣ ಚಿತ್ತಾರ ಬಿಡಿಸುತ್ತ ದೇಶ ಭಕ್ತಿಯ ಕಿಚ್ಚು ಮೊಳಗಿಸುವ ‘ಸೂರ್ಯ ಕಿರಣ’ ವಿಮಾನಗಳು ಏರ್ ಶೋಗಾಗಿ ತಾಲೀಮು ನಡೆಸುವಾಗ ಪರಸ್ಪರ ಡಿಕ್ಕಿಯಾಗಿ ಭಸ್ಮವಾಗಿವೆ. ಈ ದುರಂತದಲ್ಲಿ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ (37) ಮೃತಪಟ್ಟಿದ್ದಾರೆ.
‘ಏರ್ ಶೋ–2019’ ಶುರುವಿನ ಮುನ್ನಾದಿನವೇ ಈ ದುರಂತ ಘಟಿಸಿದೆ. ಗಾಯಗೊಂಡಿರುವ ವಿಂಗ್ ಕಮಾಂಡರ್ ವಿಜಯ್ ಸಾಳ್ಕೆ ಹಾಗೂ ಸ್ಕ್ವಾಡ್ರನ್ ಲೀಡರ್ ತೇಜೇಶ್ವರ್ ಸಿಂಗ್ ಎಚ್‌ಎಎಲ್ ರಸ್ತೆಯ ಕಮಾಂಡೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಲಹಂಕ ವಾಯುನೆಲೆಯಿಂದ ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ‘ಸೂರ್ಯ ಕಿರಣ’ದ ಎಂಟು ವಿಮಾನಗಳು ಆಗಸಕ್ಕೆ ಜಿಗಿದಿದ್ದವು. ಅವುಗಳಲ್ಲಿ ಎರಡು ವಿಮಾನಗಳು ಅಕ್ಕ–ಪಕ್ಕದಲ್ಲೇ ಹೋಗಿ ವಜ್ರಾಕಾರದಲ್ಲಿ ತಿರುಗುತ್ತಿದ್ದವು. ಬಣ್ಣದ ಹೊಗೆಯನ್ನು ಉಗುಳುತ್ತ ಆಗಸದಲ್ಲಿ ಚಿತ್ತಾರ ಮೂಡಿಸುತ್ತಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರ ದೃಷ್ಟಿ ಅವುಗಳ ಮೇಲೇ ನೆಟ್ಟಿತ್ತು.
ಸುಮಾರು 20 ನಿಮಿಷದ ತಾಲೀಮಿನ ನಂತರ ಒಂದರ ರೆಕ್ಕೆ ಇನ್ನೊಂದರ ರೆಕ್ಕೆಗೆ ತಾಕಿತು. ಇದರಿಂದ ವಿಮಾನಗಳಿಗೆ ಬೆಂಕಿ ಹೊತ್ತಿಕೊಂಡು ಆಗಸದಲ್ಲೇ ದಿಕ್ಕಾಪಾಲಾಗಿ ಸಾಗಿದವು. ತಕ್ಷಣ ಮೂವರೂ ಪೈಲಟ್‌ಗಳು ಇಜೆಕ್ಟ್ ಬಟನ್ ಒತ್ತಿ ಹೊರಕ್ಕೆ ಜಿಗಿದರು. ವಿಜಯ್ ಹಾಗೂ ತೇಜೇಶ್ವರ್ ತೊಟ್ಟಿದ್ದ ಪ್ಯಾರಾಚೂಟ್‌ಗಳು ತೆರೆದುಕೊಂಡವು. ಆದರೆ, ಸಾಹಿಲ್ ಪ್ಯಾರಾಚೂಟ್ ತೆರೆದುಕೊಳ್ಳುತ್ತಿದ್ದಂತೆಯೇ ಅದಕ್ಕೂ ಬೆಂಕಿ ಹೊತ್ತಿಕೊಂಡಿದ್ದರಿಂದ ವಿಮಾನದ ಜತೆ ಅವರೂ ಕೆಳಗೆ ಬಿದ್ದರು.
ಒಂದು ವಿಮಾನ ಆಗಸದಲ್ಲೇ ಸ್ಫೋಟಗೊಂಡು ಛಿದ್ರವಾಯಿತು. ಅದು ಮೂರು ಭಾಗವಾಗಿ ಅವಶೇಷಗಳು ಯಲಹಂಕ ವಾಯುನೆಲೆ ಯಿಂದ 17 ಕಿ.ಮೀ ದೂರದಲ್ಲಿರುವ ಇಸ್ರೋ ಲೇಔಟ್‌ಗೆ ಬಿದ್ದವು. ಇನ್ನೊಂದು ವಿಮಾನ ಅದೇ ಪ್ರದೇಶದ ತೋಟವೊಂದರಲ್ಲಿ ಬಿತ್ತು. ಅವಶೇಷಗಳು ಕ್ಷಣ ಕ್ಷಣಕ್ಕೂ ಸ್ಫೋಟಿಸುತ್ತಿದ್ದ ಕಾರಣ ಇಡೀ ಊರಿನವರೇ ಬೆಚ್ಚಿಬಿದ್ದಿದ್ದರು.
ನಾಪತ್ತೆಯಾಗಿದ್ದ ಸಾಹಿಲ್: ತಕ್ಷಣ ಪೈಲಟ್‌ಗಳ ರಕ್ಷಣೆಗೆ ತೆರಳಿದ ಕೆಲ ಯುವಕರು, ವಿಮಾನದ ಅವಶೇಷಗಳಿದ್ದ ಸ್ಥಳದಿಂದ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು. ನಂತರ ವಾಯುಸೇನೆಯ ರಕ್ಷಣಾ ಪಡೆ ಸ್ಥಳಕ್ಕೆ ಬಂದು ಇಬ್ಬರು ಪೈಲಟ್‌ಗಳನ್ನು ಹೆಲಿಕಾಪ್ಟರ್‌ನಲ್ಲೇ ಕಮಾಂಡೊ ಆಸ್ಪತ್ರೆಗೆ ಕರೆದೊಯ್ದಿತು. ಸುಮಾರು 15 ನಿಮಿಷ ಕಳೆದರೂ ಸಾಹಿಲ್ ಗಾಂಧಿ ಪತ್ತೆಯೇ ಆಗಿರಲಿಲ್ಲ. ಛಿದ್ರಛಿದ್ರವಾಗಿದ್ದ ಅವರ ದೇಹವು ಕೊನೆಗೆ ಉಮೇಶ್ ಎಂಬುವರ ತೋಟದಲ್ಲಿ ಸಿಕ್ಕಿತು.
‘ವಿಮಾನದ ಅವಶೇಷ ಮನೆಯೊಂದರ ಮಹಡಿಯ ಅಂಚಿಗೆ ಬಡಿದು ನಂತರ ಕೆಳಗೆ ಬಿದ್ದಿದೆ. ಇದರಿಂದ ಕಾಂಪೌಂಡ್‌ಗೆ ಹಾನಿಯಾಗಿದೆ. ಅದೃಷ್ಟವಷಾತ್ ಆ ಮನೆಯಲ್ಲಿ ಯಾರೂ ವಾಸವಿರಲಿಲ್ಲ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ತಿಳಿಸಿದರು.
‘ಸೂರ್ಯಕಿರಣ’ದ ವಿಶೇಷತೆ?
ವೈಮಾನಿಕ ಪ್ರದರ್ಶನದ ವೇಳೆ ಜನಾಕರ್ಷಣೆಯ ಕೇಂದ್ರ ಬಿಂದುಗಳಾಗಿರುವುದು ಸೂರ್ಯಕಿರಣ ವಿಮಾನಗಳು. ಆಗಸದಲ್ಲಿ ಸುಮಾರು 30 ನಿಮಿಷ ಅಬ್ಬರಿಸುವ ಇವು, ಸಾಹಸ ಪ್ರದರ್ಶನಕ್ಕೆ ಹೆಸರುವಾಸಿ.
*1960ರಲ್ಲಿ ನಿರ್ಮಾಣವಾದ ವಿಮಾನಗಳು. 1996ರಲ್ಲಿ ವಾಯುಪಡೆಗೆ ಸೇರ್ಪಡೆ
* ಬೀದರ್‌ನ ಏರ್‌ಬೇಸ್‌ನಲ್ಲಿದೆ ಸೂರ್ಯಕಿರಣದ ಕೇಂದ್ರ ಕಚೇರಿ
* ಪ್ರತಿ ಗಂಟೆಗೆ 780 ಕಿ.ಮೀ ವೇಗದಲ್ಲಿ ಹಾರಾಡುವ ಸಾಮರ್ಥ್ಯ
* ಎಚ್‌ಎಎಲ್‌ನಿಂದ ಅಭಿವೃದ್ಧಿಪಡಿಸಿರುವ ವಿಮಾನಗಳು
* ಪೈಲಟ್‌ಗಳಿಗೆ ತರಬೇತಿ ನೀಡಲು ಬಳಕೆ
* 5 ಟನ್ ತೂಕ, ಈವರೆಗೆ ಒಟ್ಟು 450 ಪ್ರದರ್ಶನ
ತನಿಖೆಗೆ ಆದೇಶ
‘ರೆಕ್ಕೆಗಳು ತಾಕಿದ್ದೇ ದುರಂತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಖಚಿತವಾಗಿದೆ. ಆದರೂ, ತನಿಖೆಗೆ ಆದೇಶಿಸಲಾಗಿದೆ. ತೇಜೇಶ್ವರ್ ಅವರ ಕಾಲುಗಳ ಮೂಳೆ ಮುರಿದಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಿಜಯ್ ಕುತ್ತಿಗೆ ಹಾಗೂ ಸೊಂಟಕ್ಕೆ ಪೆಟ್ಟಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಸಾಹಿಲ್ ಶವವನ್ನು ಬುಧವಾರ ಬೆಳಿಗ್ಗೆ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು’ ಎಂದು ಭಾರತೀಯ ವಾಯುನೆಲೆ (ಐಎಎಫ್) ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ವಿಮಾನ ದುರಂತಕ್ಕೆ ಬೆಚ್ಚಿತು ಇಸ್ರೊ ಬಡಾವಣೆ
ಸುಟ್ಟು ಕರಕಲಾದ ಟರ್ಕಿ ಕೋಳಿಗಳು!
ವಿಮಾನದ ಅವಶೇಷ ಬಿದ್ದಿದ್ದರಿಂದ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿತು. ಅದರಲ್ಲಿದ್ದ 20 ಟರ್ಕಿ ಕೋಳಿಗಳು ಹಾಗೂ ಎರಡು ನಾಯಿಗಳು ಸಜೀವ ದಹನವಾದವು. ಶೆಡ್‌ನಲ್ಲೇ ಇದ್ದ ಒಂಬತ್ತು ಹಸುಗಳನ್ನು ತೋಟದ ಮಾಲೀಕರು ಆಗಷ್ಟೇ ಮೇಯಲು ತೋಟಕ್ಕೆ ಬಿಟ್ಟಿದ್ದರು. ಹೀಗಾಗಿ, ಹಸುಗಳು ಬಚಾವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.