ADVERTISEMENT

ಭೇಟಿ ಬಚಾವೋ: 11 ವರ್ಷದಲ್ಲಿ 2,400 ಹೆಣ್ಣು ಮಗುವಿನ ಉಚಿತ ಹೆರಿಗೆ ಮಾಡಿಸಿದ ವೈದ್ಯ

ಪಿಟಿಐ
Published 6 ನವೆಂಬರ್ 2022, 6:56 IST
Last Updated 6 ನವೆಂಬರ್ 2022, 6:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಹೆಣ್ಣು ಮಗು ಜನಿಸಿದರೆ ಹೆರಿಗೆ ಶುಲ್ಕವನ್ನು ಪಡೆಯದೆ ಪುಣೆಯ ವೈದ್ಯರೊಬ್ಬರು 'ಭೇಟಿ ಬಚಾವೋ' ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಜನಿಸಿದ ಮಗುವನ್ನು ವಿಶೇಷವಾಗಿ ಬರಮಾಡಿಕೊಳ್ಳುವ ಮೂಲಕ ಹೆಣ್ಣು ಮಕ್ಕಳ ಜನನಕ್ಕೆ ಉತ್ತೇಜನ ನೀಡುತ್ತಿದ್ದಾರೆ.

ಮಹಾರಾಷ್ಟ್ರದ ಹಡಪ್‌ಸರ ಪ್ರದೇಶದಲ್ಲಿ ಹೆರಿಗೆ ಆಸ್ಪತ್ರೆ ನಡೆಸುತ್ತಿರುವ ಡಾ. ಗಣೇಶ್‌ ರಾಖ ಅವರು ಕಳೆದ 11 ವರ್ಷಗಳಲ್ಲಿ ಉಚಿತವಾಗಿ ಸುಮಾರು 2,400 ಹೆಣ್ಣು ಮಗುವಿನ ಹೆರಿಗೆ ಮಾಡಿಸಿದ್ದಾರೆ. ಉಚಿತ ಸೇವೆಯ ಜೊತೆಗೆ ಹೆಣ್ಣು ಭ್ರೂಣಹತ್ಯೆ ಮತ್ತು ಶಿಶುಹತ್ಯೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

2012ರಲ್ಲಿ ಡಾ. ರಾಖ ಅವರು ಹೆಣ್ಣು ಶಿಶು ಹೆರಿಗೆಯ ಉಚಿತ ಸೇವೆಯನ್ನು ಆರಂಭಿಸಿದ್ದರು. ಇದೀಗ ಹಲವು ರಾಜ್ಯಗಳಿಗೆ ವಿಸ್ತರಿಸಿದ್ದು, ಆಫ್ರಿಕಾದ ರಾಷ್ಟ್ರಗಳಲ್ಲೂ ಸೇವೆ ನೀಡುತ್ತಿದ್ದಾರೆ.

ADVERTISEMENT

2012ಕ್ಕೂ ಹಿಂದಿನ ವರ್ಷಗಳಲ್ಲಿ ನಮ್ಮ ಆಸ್ಪತ್ರೆಗೆ ಬರುತ್ತಿದ್ದವರಲ್ಲಿ ಕೆಲವರು ಹೆಣ್ಣು ಮಗು ಜನಿಸಿದರೆ ನಿರಾಸೆ ವ್ಯಕ್ತಪಡಿಸುತ್ತಿದ್ದರು. ಆಸ್ಪತ್ರೆಗೆ ಬಂದು ಮಗುವನ್ನು ನೋಡಲು ಕುಟುಂಬದ ಸದಸ್ಯರೂ ಹಿಂದೇಟು ಹಾಕುತ್ತಿದ್ದರು. ಇದರಿಂದ ವ್ಯಥೆಯಾಗುತ್ತಿತ್ತು. ಹೆಣ್ಣು ಶಿಶುವನ್ನು ರಕ್ಷಿಸುವ ನಿಟ್ಟಿನಲ್ಲಿ ತನ್ನಿಂದಾದ ಕೆಲಸವನ್ನು ಮಾಡಬೇಕು ಎಂದು ಸಂಕಲ್ಪ ತೊಟ್ಟೆ. ಹೆಣ್ಣು ಮತ್ತು ಗಂಡು ಶಿಶುಗಳ ನಡುವಣ ಸಮಾನತೆ ಕುರಿತು ಜನರಿಗೆ ಅರಿವು ಮೂಡಿಸುವ ಪ್ರಯತ್ನವನ್ನು ಆರಂಭಿಸಿದೆ ಎಂದು ಡಾ. ರಾಖ ತಿಳಿಸಿದ್ದಾರೆ.

ಈಗಲೂ ಗಂಡು ಮಗು ಜನಿಸಿದರೆ ಕೆಲವು ಕುಟುಂಬ ಸದಸ್ಯರು ಅತ್ಯಂತ ಸಂತೋಷದಿಂದ ಮಗುವನ್ನು ನೋಡಲು ಆಸ್ಪತ್ರೆಗೆ ಓಡಿಬರುತ್ತಾರೆ ಮತ್ತು ಹೆರಿಗೆ ಶುಲ್ಕವನ್ನು ಪಾವತಿಸಲು ಮುಂದಾಗುತ್ತಾರೆ. ಆದರೆ ಹೆಣ್ಣು ಮಗು ಜನಿಸಿದಾಗ ಈ ಸಂಭ್ರಮ ಇರುವುದಿಲ್ಲ ಎಂದು ಡಾ. ರಾಖ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಸಮೀಕ್ಷೆ ಪ್ರಕಾರ ಕಳೆದ 10 ವರ್ಷಗಳಲ್ಲಿ 6 ಕೋಟಿಗೂ ಹೆಚ್ಚು ಹೆಣ್ಣು ಭ್ರೂಣಹತ್ಯೆ ಪ್ರಕರಣ ದಾಖಲಾಗಿವೆ. ಇದು ಒಂದು ರೀತಿಯ 'ಜನಾಂಗೀಯ ಹತ್ಯೆ' ಎಂದು ಡಾ. ರಾಖ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.