ADVERTISEMENT

ಬಿಎಫ್‌ 7 ಉಪತಳಿ: ಭಾರತ ಆತಂಕ ಪಡಬೇಕಿಲ್ಲ- ವಿಜ್ಞಾನಿ ರಾಕೇಶ್‌ ಮಿಶ್ರಾ ಅಭಿಮತ

ಬೆಂಗಳೂರಿನ ಹಿರಿಯ ವಿಜ್ಞಾನಿ ರಾಕೇಶ್‌ ಮಿಶ್ರಾ ಅಭಿಮತ

ಪಿಟಿಐ
Published 23 ಡಿಸೆಂಬರ್ 2022, 11:04 IST
Last Updated 23 ಡಿಸೆಂಬರ್ 2022, 11:04 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಹೈದರಾಬಾದ್: ಕೊರೊನಾ ವೈರಸ್‌ನ ರೂಪಾಂತರಿ ಬಿಎಫ್‌.7, ಓಮೈಕ್ರಾನ್‌ನ ಉಪತಳಿಯಾಗಿದೆ. ಹಾಗಾಗಿ, ಈ ಉಪತಳಿಯ ಸೋಂಕಿನ ತೀವ್ರತೆ ಬಗ್ಗೆ ಭಾರತ ಆತಂಕ ಪಡುವ ಅಗತ್ಯ ಇಲ್ಲ ಎಂದು ಹಿರಿಯ ವಿಜ್ಞಾನಿ ರಾಕೇಶ್‌ ಮಿಶ್ರಾ ಶುಕ್ರವಾರ ಹೇಳಿದ್ದಾರೆ.

ಆದರೆ, ಎಲ್ಲರೂ ಮಾಸ್ಕ್‌ ಧರಿಸಬೇಕು ಹಾಗೂ ಅನಗತ್ಯವಾಗಿ ಜನರು ಗುಂಪಾಗಿ ಸೇರುವುದನ್ನು ಬಿಡಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ.

ಬೆಂಗಳೂರಿನಲ್ಲಿರುವ ಟಾಟಾ ಇನ್ಸ್‌ಟಿಟ್ಯೂಟ್‌ ಫಾರ್‌ ಜಿನೆಟಿಕ್ಸ್‌ ಅಂಡ್ ಸೊಸೈಟಿ (ಟಿಐಜಿಎಸ್‌) ನಿರ್ದೇಶಕರಾಗಿರುವ ಮಿಶ್ರಾ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

‘ಭಾರತವು ಕೊರೊನಾ ವೈರಸ್‌ ಸೋಂಕಿನ ವಿವಿಧ ಅಲೆಗಳನ್ನು ಎದುರಿಸಿದೆ. ಚೀನಾ ಇಂಥ ಅಲೆಗಳನ್ನು ಎದುರಿಸಿಲ್ಲ. ಇದೇ ಕಾರಣಕ್ಕೆ ಈಗ ಆ ದೇಶದಲ್ಲಿ ಕೋವಿಡ್‌–19ನ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ವಿವರಿಸಿದ್ದಾರೆ.

‘ಬಿಎಫ್‌.7 ಎಂಬುದು ಓಮೈಕ್ರಾನ್‌ನ ಉಪತಳಿ. ಹಾಗಾಗಿ, ಕೆಲ ಸಣ್ಣ ಬದಲಾವಣೆಗಳ ಹೊರತಾಗಿ, ಈ ವೈರಸ್‌ಗೂ ಓಮೈಕ್ರಾನ್‌ಗೂ ಅಂಥ ವ್ಯತ್ಯಾಸ ಇಲ್ಲ. ಓಮೈಕ್ರಾನ್‌ನಿಂದಾಗಿ ಕಂಡುಬಂದ ಅಲೆಯನ್ನು ಭಾರತ ಈಗಾಗಲೇ ಎದುರಿಸಿರುವ ಕಾರಣ, ಈ ಉಪತಳಿ ಕುರಿತು ಚಿಂತಿಸಬೇಕಾಗಿಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಚೀನಾ ಪ್ರಜೆಗಳು ನೈಸರ್ಗಿಕವಾಗಿ ಕಂಡುಬರುವ ಸೋಂಕಿಗೆ ಒಳಗಾಗಿಲ್ಲ. ಹಿರಿಯ ನಾಗರಿಕರಿಗೆ ಲಸಿಕೆ ನೀಡಿಲ್ಲ. ಹೀಗಾಗಿ ಅಲ್ಲಿನ ಹಿರಿಯ ನಾಗರಿಕರಲ್ಲಿ ವೇಗವಾಗಿ ಈ ಉಪತಳಿಯ ಸೋಂಕು ಹರಡುತ್ತಿದೆ. ಅದರ ತೀವ್ರತೆಯೂ ಅಧಿಕ’ ಎಂದು ಹೇಳುವ ಮೂಲಕ ಅವರು, ಚೀನಾದಲ್ಲಿರುವ ಕೋವಿಡ್‌ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

‘ಭಾರತದಲ್ಲಿ ಸದ್ಯ ಲಭ್ಯವಿರುವ ಕೋವಿಡ್‌ ಲಸಿಕೆಗಳು ಪರಿಣಾಮಕಾರಿಯಾಗಿವೆ. ಓಮೈಕ್ರಾನ್‌ ಸೇರಿದಂತೆ ವೈರಸ್‌ನ ವಿವಿಧ ತಳಿಗಳ ಸೋಂಕನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿವೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.