ಅಹಮದಾಬಾದ್:‘2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ 6ರಿಂದ 12ನೇ ತರಗತಿಗಳಲ್ಲಿ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ’ ಎಂದು ಗುಜರಾತ್ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಘೋಷಿಸಿದೆ.
ಶಿಕ್ಷಣ ಸಚಿವ ಜಿತು ವಘಾನಿ ಅವರು ಶಿಕ್ಷಣ ಇಲಾಖೆಯ ಬಜೆಟ್ ಮೇಲಿನ ಚರ್ಚೆಯ ವೇಳೆ ಈ ಪ್ರಸ್ತಾವನೆ ಪ್ರಕಟಿಸಿದ್ದಾರೆ.
ಭಗವದ್ಗೀತೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳನ್ನು ಶಾಲಾ ಪಠ್ಯಕ್ರಮದಲ್ಲಿ ಪರಿಚಯಿಸುವ ನಿರ್ಧಾರವು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (NEP) ಅನುಗುಣವಾಗಿದೆ. ಇದು ಆಧುನಿಕ ಮತ್ತು ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಪಾದಿಸುತ್ತದೆ. ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ವಘಾನಿ ಹೇಳಿದ್ದಾರೆ.
ಪ್ರಾಚೀನ ಹಿಂದೂ ಧರ್ಮಗ್ರಂಥದಲ್ಲಿ ವಿವರಿಸಿರುವ ನೈತಿಕ ಮೌಲ್ಯಗಳು ಮತ್ತು ತತ್ವಗಳನ್ನು ಎಲ್ಲಾ ಧರ್ಮದ ಜನರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
6ರಿಂದ 12ನೇ ತರಗತಿಯ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಪರಿಚಯಿಸಲು ನಿರ್ಧರಿಸಿದ್ದು, 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ‘ಸಮಗ್ರ ಶಿಕ್ಷಣ’ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು ಪರಿಚಯಿಸಲಾಗುವುದು. 12ನೇ ತರಗತಿಗೆ ಪ್ರಥಮ ಭಾಷೆಯ ಪಠ್ಯಪುಸ್ತಕದಲ್ಲಿ ಕಥೆ ಹೇಳುವ ರೂಪದಲ್ಲಿ ಭಗವದ್ಗೀತೆಯನ್ನು ಪರಿಚಯಿಸಲಾಗುತ್ತದೆ ಎಂದು ವಘಾನಿ ವಿವರಿಸಿದ್ದಾರೆ.
ಶಾಲೆಗಳಲ್ಲಿ ಪ್ರಾರ್ಥನೆ, ಶ್ಲೋಕ ಪಠಣ, ಗ್ರಹಿಕೆ, ನಾಟಕ, ರಸ ಪ್ರಶ್ನೆ, ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳಂತಹ ಚಟುವಟಿಕೆಗಳನ್ನು ಸಹ ಆಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪುಸ್ತಕಗಳು ಮತ್ತು ಆಡಿಯೊ-ವಿಡಿಯೊ ಸಿಡಿಗಳಂತಹ ಅಧ್ಯಯನ ಸಾಮಗ್ರಿಗಳನ್ನು ಸರ್ಕಾರದ ವತಿಯಿಂದ ಶಾಲೆಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಓದಿ...
ದಿ ಕಾಶ್ಮೀರ್ ಫೈಲ್ಸ್ | ಬಘೇಲ್ರನ್ನು ಸೋನಿಯಾ ವಜಾಗೊಳಿಸಬಹುದೇ –ಬಿಜೆಪಿ ಪ್ರಶ್ನೆ
₹ 25 ಕೋಟಿಗೆ ಪೆಗಾಸಸ್ ಕುತಂತ್ರಾಂಶ ಖರೀದಿ ಪ್ರಸ್ತಾಪ ಬಂದಿತ್ತು: ಮಮತಾ ಬ್ಯಾನರ್ಜಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.