ಚಂಡೀಗಡ: ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದಿರುವ ಎಎಪಿ ಸರ್ಕಾರಕ್ಕೆ ಒಬ್ಬರು ಮಹಿಳೆ ಸೇರಿದಂತೆ ಹತ್ತು ಸಚಿವರು ಶನಿವಾರ ಸೇರ್ಪಡೆ ಆಗಲಿದ್ದಾರೆ. ಸಂಭಾವ್ಯ 10 ಸಚಿವರಲ್ಲಿ ಎಂಟು ಮಂದಿ ಮೊದಲ ಬಾರಿಗೆ ಶಾಸಕರಾದವರು.
ಹೊಸ ಸಚಿವರ ಪ್ರಮಾಣವಚನ ಸಮಾರಂಭವು ರಾಜಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಮುಖ್ಯಮಂತ್ರಿ ಭಗವಂತ ಮಾನ್ ಅವರು 10 ಸಚಿವರ ಹೆಸರನ್ನು ಶುಕ್ರವಾರ ಸಂಜೆ ಟ್ವೀಟ್‌ನಲ್ಲಿ ಪ್ರಕಟಿಸಿದ್ದಾರೆ.
ಎರಡನೇ ಬಾರಿಗೆ ಶಾಸಕರಾಗಿರುವ ಹರ್ಪಾಲ್ ಸಿಂಗ್ ಚೀಮಾ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ನಿರ್ಧರಿಸಲಾಗಿದೆ. ದಿರ್ಬಾದ ಶಾಸಕ ರಾಗಿರುವ ಅವರು ದಲಿತ ಸಮು ದಾಯದ ನಾಯಕ. ಈ ಹಿಂದಿನ ವಿಧಾನಸಭೆಯಲ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಎರಡನೇ ಅವಧಿಗೆ ಆಯ್ಕೆಯಾಗಿರುವ ಗುರ್ಮೀತ್ ಸಿಂಗ್ ಹಯರ್ ಅವರನ್ನೂ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಡಾ. ಬಲ್ಜಿತ್ ಕೌರ್, ಹರಭಜನ್ ಸಿಂಗ್, ಡಾ. ವಿಜಯ್ ಸಿಂಗ್ಲಾ, ಲಾಲ್ ಚಂದ್, ಕುಲದೀಪ್ ಸಿಂಗ್ ಧಾಲಿವಲ್, ಲಾಲ್‌ಜಿತ್ ಸಿಂಗ್ ಭುಲ್ಲರ್, ಬ್ರಹ್ಮ ಶಂಕರ್ ಮತ್ತು ಹರ್ಜೋತ್ ಬೈನ್ಸ್ ಅವರು ಸಂಪುಟ ಸೇರಲಿರುವ ಇತರರು.
ಮುಖ್ಯಮಂತ್ರಿ ಸೇರಿ 18 ಸಚಿವರಿಗೆ ಸಂಪುಟದಲ್ಲಿ ಅವಕಾಶ ಇದೆ.
ಮಾನ್ ನೇತೃತ್ವದ ಸಚಿವ ಸಂಪುಟದ ಮೊದಲ ಸಭೆ ಕೂಡ ಶನಿವಾರ ಮಧ್ಯಾಹ್ನ ನಂತರ ನಡೆಯಲಿದೆ.
ಪಂಜಾಬ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಎಪಿಗೆ ಭಾರಿ ಗೆಲುವು ಲಭಿಸಿತ್ತು. 117 ಕ್ಷೇತ್ರಗಳ ಪೈಕಿ 92ರಲ್ಲಿ ಗೆದ್ದಿದೆ. ಕಾಂಗ್ರೆಸ್ ಮತ್ತು ಅಕಾಲಿ ದಳ ಹೀನಾಯವಾಗಿ ಸೋತವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.