ಚಂಡೀಗಡ: ಈ ಬಾರಿಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭಗವಂತ ಮಾನ್ (48) ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಮಂಗಳವಾರ ಪ್ರಕಟಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಲ್ಲಿ ಮಾನ್ ಅವರು ಶೇ 93ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಘೋಷಿಸಿದರು.ಎಎಪಿ ಮುಂದೆ ಇದ್ದ ಏಕೈಕ ಆಯ್ಕೆ ಮಾನ್ ಅವರಾಗಿದ್ದರು.
ಮುಖ್ಯಮಂತ್ರಿ ಅಭ್ಯರ್ಥಿಯ ಹುಡುಕಾಟಕ್ಕೆ ಎಎಪಿ ಹೊಸ ವಿಧಾನ ಅಳವಡಿಸಿಕೊಂಡಿತ್ತು.ಟೆಲಿ-ವೋಟಿಂಗ್ ಮೂಲಕ ಅಭ್ಯರ್ಥಿ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಅನುಸರಿಸಿತ್ತು. ಫೆಬ್ರುವರಿ 20ರಂದು ನಡೆಯುವ ಚುನಾವಣೆಯಲ್ಲಿ ಎಎಪಿ ನಿರ್ದಿಷ್ಟ ರಾಜಕೀಯ ಮೈಲುಗಲ್ಲು ಸಾಧಿಸುವ ಉಮೇದಿನಲ್ಲಿದೆ. ಎಎಪಿ ಹೊರತುಪಡಿಸಿದರೆ, ಪಂಜಾಬ್‌ನ ಬೇರಾವುದೇ ರಾಜಕೀಯ ಪಕ್ಷವೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಈ ಮೂಲಕ ಎಎಪಿ ಒಂದು ಹೆಜ್ಜೆ ಮುಂದೆ ಇರಿಸಿದಂತೆ ತೋರಿದ್ದು, ಪಕ್ಷದ ಕಾರ್ಯಕರ್ತರ ವಲಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.
ರಾಜ್ಯದಲ್ಲಿ ದಲಿತ ಸಮುದಾಯದ ಸಂಖ್ಯೆ ಅಧಿಕವಾಗಿದೆ ಎಂಬ ಕಾರಣಕ್ಕೆ ಅದೇ ಸಮುದಾಯಕ್ಕೆ ಸೇರಿದ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನುಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರು. ರಾಜ್ಯದಲ್ಲಿ ಶೇ 33ರಷ್ಟು ದಲಿತರಿದ್ದಾರೆ. ಆದರೆ ದಶಕಗಳ ಕಾಲ ರಾಜ್ಯವನ್ನು ಜಾಟ್ ಸಿಖ್ ಮುಖ್ಯಮಂತ್ರಿ ಆಳಿದ್ದರು. ಎಎಪಿ ಆಯ್ಕೆ ಮಾಡಿರುವ ಭಗವಂತ್ ಮಾನ್ ಅವರು ಜಾಟ್ ಸಿಖ್ ಸಮುದಾಯಕ್ಕೆ ಸೇರಿದ್ದಾರೆ.
ಮಾನ್ ಅವರನ್ನು ಹೊರತುಪಡಿಸಿ ಬೇರೆ ಯಾರನ್ನಾದರೂ ಪಕ್ಷವು ಆಯ್ಕೆ ಮಾಡಿದ್ದರೆ ವಿವಾದಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿತ್ತು. ಮಾನ್ ಅವರನ್ನು ಆಯ್ಕೆ ಮಾಡುವ ಮೂಲಕ ಪಂಜಾಬ್‌ನಲ್ಲಿ ಪಕ್ಷದ ಗೆಲುವಿನ ಪ್ರಮಾಣವನ್ನು ಎಎಪಿ ಹೆಚ್ಚಿಸಿಕೊಂಡಿದೆ. ಎಎಪಿಗೆ ಪಂಜಾಬ್‌ನಲ್ಲಿ ಪರಿಣಾಮಕಾರಿ ಎನಿಸುವ ಸಾಕಷ್ಟು ಮುಖಂಡರಿದ್ದಾರೆ. ಆದರೆ ಮಾನ್ ಅವರು ಜನನಾಯಕರಾಗಿದ್ದು, ಜನರೊಂದಿಗೆ ಬೆರೆಯುವ ಕಲೆಯು ಅವರಿಗೆ ಸಿದ್ಧಿಸಿದೆ. ಎಎಪಿ ಹಾಗೂ ಕೇಜ್ರಿವಾಲ್‌ಗೆ ನಿಷ್ಠರಾಗಿ ಇರುವುದೂ ಮಾನ್ ಅವರ ಆಯ್ಕೆ ಹಿಂದಿರುವ ಪ್ರಮುಖ ಕಾರಣವಾಗಿದೆ.
ನಾಯಕರ ಆಂತರಿಕ ಕಚ್ಚಾಟ ಮತ್ತು ಪಕ್ಷಾಂತರ ಪ್ರವೃತ್ತಿಯಿಂದ ಪಕ್ಷ ಈಗಾಗಲೇ ಸಾಕಷ್ಟು ಅನುಭವಿಸಿದೆ. ಆದರೆ ಮಾನ್ ಈ ಎಲ್ಲಾ ಗೊಂದಲಗಳ ನಡುವೆಯೇ ಪಕ್ಷದಲ್ಲಿ ಉಳಿದು, ಎಎಪಿಯ ಹೆಜ್ಜೆಗುರುತುಗಳನ್ನು ರಾಜ್ಯದಾದ್ಯಂತ ಹೆಚ್ಚಿಸಲು ತಳಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯದ ಮಣ್ಣಿನ ಮಗನನ್ನು ಮುಖ್ಯಮಂತ್ರಿಯಾಗಿ ಹೆಸರಿಸುವ ಇಂದಿನ ಘೋಷಣೆಯು, ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ.
ಜಾಟ್ ಸಿಖ್ ಮತ ಸೆಳೆಯುವ ತಂತ್ರ
ರಾಜ್ಯದಲ್ಲಿರುವ ಜಾಟ್ ಸಿಖ್ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ಎಎಪಿಯು ಮಾನ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ ಎನ್ನಲಾಗಿದೆ. 2017ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಜಾಟ್ ಸಿಖ್ ಸಮುದಾಯದ ಶೇ 30ರಷ್ಟು ಮತಗಳನ್ನು ಪಡೆದಿತ್ತು. ಇದು ಮುಖ್ಯವಾಹಿನಿಯಲ್ಲಿರುವ ಕಾಂಗ್ರೆಸ್ ಪಕ್ಷ ಗಳಿಸಿದ್ದಕ್ಕಿಂತ ಹೆಚ್ಚು. ರಾಜ್ಯದಲ್ಲಿ ಅಕಾಲಿದಳ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ಹೋಗುತ್ತಿದ್ದ ಈ ಸಮುದಾಯದ ಮತಗಳು ಕಳೆದ ಬಾರಿ ಎಎಪಿ ಪಾಲಾಗಿದ್ದವು. ಅಕಾಲಿದಳ ಹಾಗೂ ಬಿಜೆಪಿ ಮೈತ್ರಿಕೂಟವು 2012ರ ಚುನಾವಣೆಯಲ್ಲಿ ಈ ಸಮುದಾಯದ ಶೇ 57ರಷ್ಟು ಮತಗಳನ್ನು ಪಡೆದಿತ್ತು. ಈ ಪ್ರಮಾಣವು 2017ರ ಚುನಾವಣೆಯಲ್ಲಿ ಶೇ 37ಕ್ಕೆ ಕುಸಿದಿತ್ತು. ರಾಜ್ಯದ ರಾಜಕೀಯ ಪ್ರವೇಶಿಸಿದ್ದಎಎಪಿ, ಈ ಸಮುದಾಯದ ಹೆಚ್ಚು ಮತಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.