ಜೈಪುರ: ಭಜನ್ ಲಾಲ್ ಶರ್ಮಾ ಅವರು ರಾಜಸ್ಥಾನದ 14ನೇ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.
ಇಲ್ಲಿನ ಐತಿಹಾಸಿಕ ಆಲ್ಬರ್ಟ್ ಹಾಲ್ ಮ್ಯೂಸಿಯಂ ಮುಂಭಾಗದ ರಾಮ ನಿವಾಸ್ ಬಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಳಗೊಂಡಂತೆ ಬಿಜೆಪಿಯ ಹಲವು ಉನ್ನತ ನಾಯಕರು ಪಾಲ್ಗೊಂಡರು.
ರಾಜಸ್ಥಾನ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಭಜನ್ ಲಾಲ್ ತಮ್ಮ 57ನೇ ಜನ್ಮದಿನದಂದು ಸಿ.ಎಂ ಹುದ್ದೆ ವಹಿಸಿಕೊಂಡದ್ದು ವಿಶೇಷ. ದಿಯಾ ಕುಮಾರಿ ಮತ್ತು ಪ್ರೇಮಚಂದ್ರ ಬೈರ್ವ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಮೂವರಿಗೂ ಪ್ರಮಾಣ ವಚನ ಬೋಧಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಪಕ್ಷದ ನೂರಾರು ಕಾರ್ಯಕರ್ತರು ಸಮಾರಂಭಕ್ಕೆ ಸಾಕ್ಷಿಯಾದರು. ‘ಜೈಶ್ರೀರಾಮ್’, ’ಮೋದಿ–ಮೋದಿ‘ ಘೋಷಣೆಗಳು ಮೊಳಗಿದವು.
ಆರ್‌ಎಸ್‌ಎಸ್ ಬೆಂಬಲಿತ ಭಜನ್ ಲಾಲ್ ಅವರನ್ನು ಬಿಜೆಪಿ ವರಿಷ್ಠರು ಡಿ.12 ರಂದು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರು. ಬ್ರಾಹ್ಮಣ ಸಮುದಾಯದ ಅವರು ಸಂಗಾನೇರ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ನಿರ್ಗಮಿತ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದು, ನೂತನ ಸಿ.ಎಂಗೆ ಅಭಿನಂದನೆ ಸಲ್ಲಿಸಿದರು.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಗಜೇಂದ್ರ ಸಿಂಗ್ ಶೆಖಾವತ್ ಮತ್ತು ಬಿಜೆಪಿ ಅಧಿಕಾರದಲ್ಲಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಾಧುಗಳು ಹಾಗೂ ಸಂತರು ಕಾರ್ಯಕ್ರಮದಲ್ಲಿ ಭಾಗಿಯಾದರು.
ಸಮಾರಂಭಕ್ಕೆ ಮುನ್ನ ಪ್ರವೇಶದ್ವಾರದ ಬಳಿ ಕೆಲಹೊತ್ತು ಗೊಂದಲ ಏರ್ಪಟ್ಟಿತು. ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ತಳ್ಳಿ ಏಕಕಾಲದಲ್ಲಿ ಒಳಗೆ ನುಗ್ಗಲು ಪ್ರಯತ್ನಿಸಿದ್ದು ಇದಕ್ಕೆ ಕಾರಣ. ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ನೂತನ ಮುಖ್ಯಮಂತ್ರಿ ಭಜನ್ ಲಾಲ್ ಅವರಿಗೆ ನನ್ನ ಶುಭಾಹಾರೈಕೆಗಳು. ರಾಜಸ್ಥಾನ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸಲಿದೆ
-ನರೇಂದ್ರ ಮೋದಿ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.