ADVERTISEMENT

ಆಗಸ್ಟ್‌ ಅಂತ್ಯದ ವೇಳೆಗೆ ಪುಣೆಯಲ್ಲಿ ಭಾರತ್‌ ಬಯೋಟೆಕ್‌ ಘಟಕ

ಕರ್ನಾಟಕ ಮೂಲದ ಬಯೋವೆಟ್‌ ಸಂಸ್ಥೆಯಿಂದ ಸಿದ್ಧತಾ ಕಾರ್ಯ ಆರಂಭ

ಪಿಟಿಐ
Published 14 ಮೇ 2021, 5:47 IST
Last Updated 14 ಮೇ 2021, 5:47 IST
ಕೋವ್ಯಾಕ್ಸಿನ್
ಕೋವ್ಯಾಕ್ಸಿನ್   

ಪುಣೆ: ಭಾರತ್ ಬಯೋಟೆಕ್‌ನ ಸಹಾಯಕ ಸಂಸ್ಥೆಯಾದ ಕರ್ನಾಟಕ ಮೂಲದ ‘ಬಯೋವೆಟ್ ಲಿಮಿಟೆಡ್‌’ ಆಗಸ್ಟ್ ಅಂತ್ಯದ ವೇಳೆಗೆ ಲಸಿಕೆ ಉತ್ಪಾದನೆಗಾಗಿ ಪುಣೆಯ ಮಂಜರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಘಟಕವನ್ನು ಹೊಂದುವ ವಿಶ್ವಾಸವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ತಯಾರಕ ಸಂಸ್ಥೆಯಾಗಿದ್ದು, ಕೋವಿಡ್‌–19ರ ವಿರುದ್ಧ ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿ ಬಳಸುತ್ತಿರುವ ಎರಡು ಲಸಿಕೆಗಳಲ್ಲಿ ಇದೂ ಒಂದಾಗಿದೆ.

ಪುಣೆ ವಿಭಾಗೀಯ ಆಯುಕ್ತ ಸೌರಭ್ ರಾವ್ ಮತ್ತು ಜಿಲ್ಲಾಧಿಕಾರಿ ರಾಜೇಶ್ ದೇಶಮುಖ್‌ ಅವರು ಬುಧವಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಪುಣೆಯ ಮಂಜರಿಯಲ್ಲಿ ನಿರ್ಮಿಸಲಾಗಿರುವ ಲಸಿಕೆ ಉತ್ಪಾದನಾ ಘಟಕವನ್ನು ಸ್ವಾಧೀನಕ್ಕೆ ಪಡೆದು, ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದನೆಗೆ ಕ್ರಮ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಬಯೋವೆಟ್‌ಗೆ ಅನುಮತಿ ನೀಡಿತ್ತು.

‘ಘಟಕವು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದ್ದು ಸಜ್ಜಾಗಿದೆ. ಕಂಪನಿಯು ಸಮರ್ಥ ಮತ್ತು ಸಮರ್ಪಿತ ಮನೋಭಾವದಿಂದ ಕೆಲಸ ಮಾಡುವ ತಂಡವನ್ನು ಹೊಂದಿದೆ. ಲಸಿಕೆ ಉತ್ಪಾದನೆ ಆರಂಭಿಸಲು ಇಷ್ಟು ಸಾಕು ಎನಿಸುತ್ತದೆ’ ಎಂದು ಸೌರಭ್‌ ರಾವ್‌ ಸುದ್ದಿ ಸಂಸ್ಥೆಗೆ ತಿಳಿಸಿದರು.

ಬಯೋವೆಟ್ ಅಧಿಕಾರಿಗಳು ಘಟಕದಲ್ಲಿ ಲಭ್ಯವಿರುವ ಮೂಲಸೌಕರ್ಯಗಳನ್ನು ಇನ್ನೂ ಪರಿಶೀಲಿಸುತ್ತಿದ್ದಾರೆ. ಲಸಿಕೆ ತಯಾರಿಕೆಯು ಬಹಳ ಅತ್ಯಾಧುನಿಕ, ಸೂಕ್ಷ್ಮ ವಿಷಯವಾಗಿರುವುದರಿಂದ ಮತ್ತು ಪ್ರಕ್ರಿಯೆಯು ಸಂಪೂರ್ಣವಾಗಿ ವೈಜ್ಞಾನಿಕವಾದುದರಿಂದ, ಕಂಪನಿಯು ಸಮಗ್ರವಾಗಿ ಪರಿಶೀಲನೆ ನಡೆಸುತ್ತಿದೆ. ಅವರು ಸಂಪೂರ್ಣ ಉತ್ಪಾದನಾ ಮಾರ್ಗ ಮತ್ತು ಇತರ ಯಂತ್ರೋಪಕರಣಗಳನ್ನೂ ಗಮನಿಸುತ್ತಿದ್ದಾರೆ ಎಂದು ಆಯುಕ್ತರು ತಿಳಿಸಿದರು.

ಬಯೋವೆಟ್ ಅಧಿಕಾರಿಗಳು ವಾರದೊಳಗೆ ಸೌಲಭ್ಯದ ಮೌಲ್ಯಮಾಪನ ಪೂರ್ಣಗೊಳಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಪರವಾನಗಿ, ಅನುಮತಿಗಳು, ನಿಯಂತ್ರಕ ನಿರ್ಧಾರಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಕಂಪನಿಯು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಪ್ರೋತ್ಸಾಹ ಮತ್ತು ಬೆಂಬಲ ಪಡೆಯುತ್ತಿದೆ. ಹಾಗಾಗಿ ಆಗಸ್ಟ್‌ ಅಂತ್ಯದೊಳಗೆ ಘಟಕ ಪೂರ್ಣವಾಗಿ ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ಅಲ್ಲದೆ ಲಸಿಕೆಯ ಉತ್ಪಾದನೆಗೂ ಚಾಲನೆ ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಮೂಲದ ಬಯೋವೆಟ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಬಾಂಬೆ ಹೈಕೋರ್ಟ್ ಈ ಕುರಿತು ಅನುಮೋದನೆ ನೀಡಿತ್ತು.

ಕೋವಿಡ್‌ -19ರ ಪರಿಸ್ಥಿತಿಯನ್ನು ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳು ಈ ಸ್ವತ್ತನ್ನು ಬಯೋವೆಟ್‌ಗೆ ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತ್ತು.

1973ರಲ್ಲಿ ಕಾಲುಬಾಯಿ ರೋಗಕ್ಕೆ ಲಸಿಕೆ ತಯಾರಿಸಲು ಈ ಜಮೀನನ್ನು ಮಂಜೂರು ಮಾಡಲಾಗಿತ್ತು. ಅಮೆರಿಕ ಮೂಲದ ಬಹುರಾಷ್ಟ್ರೀಯ ಔಷಧ ತಯಾರಿಕಾ ಕಂಪನಿಯಾದ ‘ಮೆರ್ಕ್ ಆಂಡ್ ಕೋ ’ದ ಅಂಗಸಂಸ್ಥೆ ‘ಇಂಟರ್ವೆಟ್ ಇಂಡಿಯಾ ಲಿಮಿಟೆಡ್’ ಈ ಘಟಕವನ್ನು ಮೊದಲು ಬಳಸಿತ್ತು.

‘ಇಂಟರ್ವೆಟ್’ ಭಾರತದಲ್ಲಿ ವ್ಯವಹಾರ ಕಾರ್ಯಾಚರಣೆಯಿಂದ ನಿರ್ಗಮಿಸಿದ್ದು, ಈ ಜಮೀನು ಮತ್ತು ಉತ್ಪಾದನಾ ಘಟಕವನ್ನು ಬಯೋವೆಟ್‌ಗೆ ವರ್ಗಾಯಿಸುವ ಸಂಬಂಧ ಒಪ್ಪಂದ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.