ADVERTISEMENT

ಮಣಿಪುರದ ಥೌಬಲ್‌ ಜಿಲ್ಲೆಯಿಂದ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭ: ಕಾಂಗ್ರೆಸ್

ಪಿಟಿಐ
Published 12 ಜನವರಿ 2024, 9:35 IST
Last Updated 12 ಜನವರಿ 2024, 9:35 IST
<div class="paragraphs"><p>ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ</p></div>

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ

   

ಇಂಫಾಲ್‌: ಪಕ್ಷದ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಭಾರತ ಜೋಡೊ ನ್ಯಾಯ ಯಾತ್ರೆ’ಯು ಜ.14ರಂದು ಮಣಿಪುರದ ಥೌಬಲ್‌ ಜಿಲ್ಲೆಯಿಂದ ಆರಂಭವಾಗಲಿದೆ ಎಂದು ಕಾಂಗ್ರೆಸ್‌ ಶುಕ್ರವಾರ ಹೇಳಿದೆ.

‘ಇಂಫಾಲ್‌ ನಗರದ ಹಪ್ತಾ ಕಂಗ್‌ಜೀಬಂಗ್ ಮೈದಾನದಿಂದ ಯಾತ್ರೆ ಆರಂಭಿಸಲು ಪಕ್ಷವು ಅನುಮತಿ ಕೋರಿತ್ತು. ಈ ಸ್ಥಳದಿಂದ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಲಿಲ್ಲ. ಆದರೆ, ಬೇರೆ ಸ್ಥಳದಿಂದ ಯಾತ್ರೆಗೆ ಚಾಲನೆ ನೀಡಬೇಕು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ. ಹೀಗಾಗಿ, 34 ಕಿ.ಮೀ. ದೂರದ ಥೌಬಲ್‌ ಜಿಲ್ಲೆಯಿಂದ ಈ ಯಾತ್ರೆ ಆರಂಭಿಸಲಿದ್ದೇವೆ’ ಎಂದು ಮಣಿಪುರದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೀಶಮ್ ಮೇಘಚಂದ್ರ ಹೇಳಿದ್ದಾರೆ.

ADVERTISEMENT

‘ಇಂಫಾಲ್‌ದಿಂದ ಯಾತ್ರೆ ಆರಂಭಕ್ಕೆ ಅನುಮತಿ ಕೋರಿ, ಈ ಮೊದಲು ಜ. 2ರಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಅನುಮತಿ ನೀಡಲಿಲ್ಲ. ಜ. 10ರಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿದೆವು. ಆಗಲೂ, ಅನುಮತಿ ನೀಡಲಿಲ್ಲ’ ಎಂದರು.

‘ನಂತರ, ಅದೇ ದಿನ ರಾತ್ರಿ ಅನುಮತಿ ನೀಡಿ ಆದೇಶ ಹೊರಡಿಸಲಾಯಿತಾದರೂ, ಸಾವಿರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳಬಾರದು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಯಿತು’ ಎಂದು ಮೇಘಚಂದ್ರ ಹೇಳಿದ್ದಾರೆ.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದ ನಿಯೋಗವು ಮುಖ್ಯ ಕಾರ್ಯದರ್ಶಿ ವಿನೀತ್‌ ಜೋಶಿ ಅವರನ್ನು ಮತ್ತೆ ಭೇಟಿ ಮಾಡಿ ಮನವಿ ಸಲ್ಲಿಸಿತು. ಡಿಜಿಪಿ ರಾಜೀವ್‌ ಸಿಂಗ್‌, ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸಹ ಆ ಸಂದರ್ಭದಲ್ಲಿ ಇದ್ದರು’.

‘ಥೌಬಲ್ ಜಿಲ್ಲೆಯ ಖೋಂಗ್‌ಜೊಮ್ ಪ್ರದೇಶದ ಖಾಸಗಿ ಜಾಗವೊಂದರಿಂದ ಯಾತ್ರೆ ಆರಂಭಿಸಲು ಜಿಲ್ಲಾಧಿಕಾರಿ ಗುರುವಾರ ರಾತ್ರಿ ಅನುಮತಿ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾತ್ರೆಗೆ ಚಾಲನೆ ನೀಡುವರು’ ಎಂದು ಅವರು ಹೇಳಿದ್ದಾರೆ.

ಭಾರತ ಜೋಡೊ ನ್ಯಾಯ ಯಾತ್ರೆಯು ಮಾರ್ಚ್‌ 20ರಂದು ಮುಂಬೈನಲ್ಲಿ ಮುಕ್ತಾಯವಾಗಲಿದೆ. 67 ದಿನಗಳ ಈ ಯಾತ್ರೆಯು 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಸಾಗಿ ಒಟ್ಟು 6,713 ಕಿ.ಮೀ. ಕ್ರಮಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.