ADVERTISEMENT

ಮಾ.2ರಂದು ಮಧ್ಯಪ್ರದೇಶ ಪ್ರವೇಶಿಸಲಿರುವ ನ್ಯಾಯ ಯಾತ್ರೆ: ಮಾ.6ರ ವರೆಗೆ ಸಂಚಾರ

ಪಿಟಿಐ
Published 27 ಫೆಬ್ರುವರಿ 2024, 9:49 IST
Last Updated 27 ಫೆಬ್ರುವರಿ 2024, 9:49 IST
   

ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ ಜೋಡೊ ನ್ಯಾಯ ಯಾತ್ರೆ' ಮಾರ್ಚ್ 2 ರಂದು ಮಧ್ಯಪ್ರದೇಶಕ್ಕೆ ಪ್ರವೇಶಿಸಲಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ನಡೆಸಲಾಗುತ್ತಿರುವ ಈ ಜನಸಂಪರ್ಕ ಕಾರ್ಯಕ್ರಮವು ಮಾರ್ಚ್ 6ವರೆಗೆ ರಾಜ್ಯದಲ್ಲಿ ಮುಂದುವರಿಯಲಿದೆ ಎಂದು ಪಕ್ಷದ ಮುಖಂಡರೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಮಾ. 2ರಂದು ಮೊರೆನಾ ಜಿಲ್ಲೆಯ ಪಿಪ್ರಾಯಿಯಲ್ಲಿ ಯಾತ್ರೆ ರಾಜ್ಯವನ್ನು ಪ್ರವೇಶಿಸಿಲಿದೆ. ಬಳಿಕ ರಾಹುಲ್‌ ಗಾಂಧಿ ರೋಡ್ ಶೋ ನಡೆಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ರಾಜೀವ್ ಸಿಂಗ್ ತಿಳಿಸಿದ್ದಾರೆ. ನಂತರ ಯಾತ್ರೆ ‌ಗ್ವಾಲಿಯರ್ ನಗರವನ್ನು ತಲುಪಲಿದ್ದು, ಅಲ್ಲಿ ರಾಹುಲ್‌ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಾ.3ರಂದು, ಗ್ವಾಲಿಯರ್‌ನಲ್ಲಿ ಅಗ್ನಿವೀರ್ ಮಾಜಿ ಸೈನಿಕರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಬಳಿಕ ಯಾತ್ರೆಯು ವಿವಿಧ ಗ್ರಾಮಗಳು ಮತ್ತು ಪಟ್ಟಣಗಳನ್ನು ಹಾದು ಶಿವಪುರಿ ತಲುಪಲಿದೆ. ಶಿವಪುರಿಗೆ ಹೋಗುವ ದಾರಿಯಲ್ಲಿ ರಾಹುಲ್‌ ಗಾಂಧಿ ಮೊಖೇದಾದಲ್ಲಿ ಬುಡಕಟ್ಟು ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ .

ADVERTISEMENT

ಶಿವಪುರಿ ನಗರದಲ್ಲಿ ರೋಡ್‌ ಶೋ ನಡೆಸಿ ನಂತರ ರಾಹುಲ್‌ ಗಾಂಧಿ ಬದರ್ವಾಸ್ ಪಟ್ಟಣವನ್ನು ತಲುಪಲಿದ್ದಾರೆ. ಅಲ್ಲಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಂದು ರಾತ್ರಿ ಬದರ್ವಾಸ್ ಪಟ್ಟಣದಲ್ಲಿ ತಂಗಲಿದ್ದಾರೆ.

ಬಳಿಕ ಮಾ.4ರಂದು, ಯಾತ್ರೆಯು ಗುನಾ ಜಿಲ್ಲೆಯ ಮಿಯಾನಾದಿಂದ ಪುನರಾರಂಭಗೊಳ್ಳಲಿದೆ. ವಿವಿಧ ಗ್ರಾಮಗಳ ಮೂಲಕ ಹಾದು ರಾಘೋಗಢವನ್ನು ತಲುಪಲಿದೆ. ಇಲ್ಲಿ ರೋಡ್‌ ಶೋ ನಡೆಸಿ ಬಳಿಕ ರಾಹುಲ್‌ ಗಾಂಧಿ ರಾಜ್‌ಗಢ್ ಜಿಲ್ಲೆಯ ಚೌರಾಹಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಭಾತ್ಖೇಡಿಯಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಮಾ.5 ರಂದು ಪಚೋರ್‌ನಿಂದ ಯಾತ್ರೆ ಪುನರಾರಂಭವಾಗಲಿದೆ. ಶಾಜಾಪುರದಲ್ಲಿ ರೋಡ್‌ ಶೋ ನಡೆಸಿ ಬಳಿಕ ಮಕ್ಸಿ ಪಟ್ಟಣದಲ್ಲಿ ರಾಹುಲ್‌ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಯಾತ್ರೆ ಉಜ್ಜಯಿನಿಗೆ ತೆರಳಲಿದ್ದು, ಮಹಾಕಾಲೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಮಾ.6 ರಂದು ಬಾದ್‌ನಗರದಿಂದ ಯಾತ್ರೆ ಆರಂಭಗೊಳ್ಳಲಿದೆ. ಇಲ್ಲಿ ರಾಹುಲ್‌ ಗಾಂಧಿ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲದೇ ರೋಡ್‌ ಶೋ ನಡೆಸಿ ಸಾರ್ವಜನಿಕ ಸಭೆಯನ್ನೂ ನಡೆಸಲಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.