ತಿರುವನಂತಪುರ: ಭಾರತ್ ಜೋಡೊ ಯಾತ್ರೆಗೆ ದೇಣಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತರಕಾರಿ ವ್ಯಾಪಾರಿಯೊಬ್ಬರಿಗೆಬೆದರಿಕೆ ಹಾಕಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರು ತರಕಾರಿ ವ್ಯಾಪಾರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಅಂಗಡಿ ಬಳಿ ಬಂದು ಭಾರತ್ ಜೋಡೊ ಯಾತ್ರೆಗೆ ದೇಣಿ ನೀಡುವಂತೆ ಕೇಳಿದರು. ನಾನು ₹500 ಅವರಿಗೆ ಕೊಟ್ಟಿದ್ದೆ. ಆದರೆ, ₹2,000 ನೀಡುವಂತೆ ಅವರು ಬೇಡಿಕೆಯಿಟ್ಟಿದ್ದರು. ನಾನು ಅಷ್ಟೊಂದು ಹಣ ನೀಡುವುದಕ್ಕೆ ನಿರಾಕರಿಸಿದೆ. ಕೂಡಲೇ ಅವರು ತಕ್ಕಡಿಯನ್ನು ಹೊರಗೆ ಎಸೆದು, ತರಕಾರಿಗಳನ್ನು ಚೆಲ್ಲಾಡಿದರು’ ಎಂದು ತರಕಾರಿ ಅಂಗಡಿ ಮಾಲೀಕ ಎಸ್.ಫವಾಜ್ ಕುನ್ನಿಕೋಡು ತಿಳಿಸಿದ್ದಾರೆ.
ಹಣನೀಡದಿದ್ದರೆ ಯಾರನ್ನೂ ಜೀವಂತವಾಗಿ ಬಿಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂದುಫವಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕೇರಳದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಅನೀಶ್ ಖಾನ್ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಿಜೆಪಿ ಖಂಡನೆ: ತರಕಾರಿ ವ್ಯಾಪಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿರುವ ವಿಡಿಯೊ ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ ‘ಗಾಂಧಿಗಿರಿಯಿಂದ ಗೂಂಡಾಗಿರಿಗೆ -ಕಾಂಗ್ರೆಸ್‌ಗೆ ಎಂತಹ ಸ್ಥಿತಿ ಬಂದಿದೆ’ ಎಂದು ಟ್ವೀಟ್ ಮಾಡಿದೆ.
ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೊ ಯಾತ್ರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದ್ದರು. ಈ ಯಾತ್ರೆ 150 ದಿನಗಳ ಕಾಲ 12 ರಾಜ್ಯಗಳ ಮೂಲಕ 3,750 ಕಿ.ಮೀ ಕ್ರಮಿಸಲಿದ್ದು, ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.