ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಯನ್ನು ಬಿಆರ್‌ಎಸ್ ಪಕ್ಷದ ನಾಯಕಿ ಕವಿತಾ ಅವರು ಟೀಕಿಸಿದ್ದಾರೆ. ಸಾವಿರ ಇಲಿಗಳನ್ನು ಕೊಂದು ಬೆಕ್ಕೊಂದು ಹಜ್ ಯಾತ್ರೆಗೆ ಹೋದಂತೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಭೋದನ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ 62 ವರ್ಷ ದೇಶವನ್ನು ಆಳಿತು. ಗರೀಬಿ ಹಠಾವೋ ಘೋಷಣೆಯ ಹೊರತಾಗಿಯೂ ಬಡವರು ಬಡವರಾಗಿಯೇ ಉಳಿದರು ಎಂದು ಹೇಳಿದರು.
2024ರ ಲೋಸಕಭೆ ಚುನಾವಣೆಯಲ್ಲಿ ನಿಜಾಮಾಬಾದ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದ ಬಳಿಕ ಕ್ಷೇತ್ರಕ್ಕೆ ಅವರ ಮೊದಲ ಭೇಟಿ ಇದಾಗಿದೆ.
ನಿಜಾಮಾಬಾದ್‌ಗೆ ಬಂದ ಅವರನ್ನು ಬಿಆರ್‌ಎಸ್ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.
‘ಅವರು (ರಾಹುಲ್ ಗಾಂಧಿ) ಕಾಲ್ನಡಿಗೆ ಯಾತ್ರೆ ಮಾಡಿದರು. ಅದು ನನಗೆ ಹೇಗನ್ನಿಸಿತ್ತು ಗೊತ್ತಾ? ಸಾವಿರ ಇಲಿಗಳನ್ನು ಕೊಂದು ಬೆಕ್ಕೊಂದು ಹಜ್ ಯಾತ್ರೆ ಮಾಡಿದಂತೆ’ ಎಂದು ವ್ಯಂಗ್ಯವಾಡಿದರು.
‘ದೇಶ ಸ್ವಾತಂತ್ರ್ಯ ಪಡೆದ ಬಳಿಕ ಕಾಂಗ್ರೆಸ್ ಪಕ್ಷವು 62 ವರ್ಷಗಳ ಕಾಲ ಆಳ್ವಿಕೆ ನಡೆಸಿತು. ಅವರು ಮುಸ್ಲಿಮರಿಗೆ ಮಾಡಿದ್ದೇನು? ಗರೀಬಿ ಹಠಾವೋ ಎಂದು ಹೇಳಿದರಷ್ಟೇ. ಬಡವರಿಗೆ ಮಾಡಿದ್ದೇನು? ಬಡವರನ್ನು ಇಲ್ಲವಾಗಿಸಿದಿರಿ. ಆದರೆ ಬಡವತನವನ್ನಲ್ಲ’ ಎಂದು ಹರಿಹಾಯ್ದರು.
ಅಲ್ಲದೆ ಬಿಆರ್‌ಎಸ್ ಪಕ್ಷದ ಕಾರ್ಯಕರ್ತರು ಕ್ಷೇತ್ರದಲ್ಲಿರುವ ಪ್ರತಿ ಮನೆ ಹಾಗೂ ಮಸೀದಿಗೆ ತೆರಳಿ ಮೌಲಾನಗಳನ್ನು ಭೇಟಿ ಮಾಡಿ ಕಾಂಗ್ರೆಸ್‌ಗೆ ಮತ ಹಾಕದಂತೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಕಳೆದ 10 ವರ್ಷದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ರಾಜ್ಯದಲ್ಲಿ ಉಂಟು ಮಾಡಿದ ಕ್ರಾಂತಿಯನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಅಲ್ಪಸಂಖ್ಯಾತ ಸಹೋದರ, ಸಹೋದರಿಯರು ಯಾರಿಗೆ ಮತ ಹಾಕಬೇಕು ಎಂಬುದನ್ನು ಯೋಚಿಸಬೇಕು ಎಂದರು.
ಅಲ್ಲದೆ ಕಳೆದ 10 ವರ್ಷಗಳ ಕೆ.ಸಿ.ಆರ್ ಅವರ ಆಡಳಿತಾವಧಿಯಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.